ನವದೆಹಲಿ: ದಕ್ಷಿಣ ದೆಹಲಿಯ ಕಿಡ್ನಿ ದಂಧೆ ಗ್ಯಾಂಗ್ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ದೊಡ್ಡ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸಕರಾಗಿರುವ 34 ವರ್ಷದ ಡಾಕ್ಟರ್ ಪ್ರಿಯಾಂಶ್ ಶರ್ಮಾ ಇಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಡಾ. ಶರ್ಮಾ 2007 ರಿಂದ 2013 ರ ನಡುವೆ ಉತ್ತರ ಪ್ರದೇಶದ ಬರೇಲಿಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಅವರು ಇಟಾವಾ ಜಿಲ್ಲೆಯ ಸೈಫೈನಲ್ಲಿ ತಮ್ಮ ಎಂಎಸ್ ಪದವಿಯನ್ನು ಮುಗಿಸಿದ್ದಾರೆ.
ಆರೋಪಿಗಳು ಹರಿಯಾಣದ ಸೋನಿಪತ್ ಜಿಲ್ಲೆಯ ಗೊಹಾನಾ ನಗರದ ಆಸ್ಪತ್ರೆಯಲ್ಲಿ ಅಕ್ರಮ ಮೂತ್ರಪಿಂಡ ಕಸಿ ಕಾರ್ಯಾಚರಣೆ ನಡೆಸುತ್ತಿದ್ದರು. ಡಾ.ಶರ್ಮಾ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಕುಲದೀಪ್ ಜೊತೆ ನೇರವಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಬುಧವಾರ ದಕ್ಷಿಣ ದೆಹಲಿಯಲ್ಲಿ ಕಿಡ್ನಿ ದಂಧೆ ತಂಡವನ್ನು ಭೇದಿಸಿದ್ದರು ಮತ್ತು ನಗರದ ವಿವಿಧ ಭಾಗಗಳಿಂದ 10 ಜನರನ್ನು ಬಂಧಿಸಿದ್ದರು. ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಪೊಲೀಸರು ಇದುವರೆಗೆ 11 ಜನರನ್ನು ಬಂಧಿಸಿದ್ದಾರೆ. ಅವರಲ್ಲಿ ಮೂವರು ವೈದ್ಯರು ಮತ್ತು ಇಬ್ಬರು ಲ್ಯಾಬ್ ತಂತ್ರಜ್ಞರು ಮತ್ತು ಉಳಿದವರು ಸಹಾಯಕರು ಇದ್ದಾರೆ. ಸೋನಿಪತ್‌ನಲ್ಲಿ ಆಪರೇಷನ್ ಥಿಯೇಟರ್ ಸ್ಥಾಪಿಸಲಾಗಿದ್ದು, ಅಲ್ಲಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತಿತ್ತು.
ವಿಚಾರಣೆಯ ಸಮಯದಲ್ಲಿ ಬಂಧಿತ ವೈದ್ಯ ಆಪರೇಷನ್‌ಗಾಗಿ ರೋಗಿಯಿಂದ ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಸುಮಾರು 14 ಜನರನ್ನು ಆರು ತಿಂಗಳಿನಿಂದ ಟಾರ್ಗೆಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ವಿಷಯದ ತನಿಖೆ ನಡೆಯುತ್ತಿರುವುದರಿಂದ ಅಂಕಿಅಂಶ ಹೆಚ್ಚಾಗಬಹುದು ಎಂದು ಪೊಲೀಸರು ಹೇಳಿದ್ದಾರೆ.
ವೈದ್ಯರು ಮುಖ್ಯವಾಗಿ ಬಡವರನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಹಣ ನೀಡುವ ಮೂಲಕ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ.