janadhvani

Kannada Online News Paper

ಧ್ವನಿವರ್ಧಕ: ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ಬಳಸಿ- ರಾಜ್ಯ ಉಲಮಾ ಒಕ್ಕೂಟ ವಿನಂತಿ

ಆರಾಧನಾಲಯಗಳ ಆಸುಪಾಸಿನಲ್ಲಿರುವ ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿಕೊಂಡು ಧ್ವನಿವರ್ಧಕವನ್ನು ಬಳಸಬೇಕೆಂದು ಕರ್ನಾಟಕದ ಸುನ್ನೀ ವಿದ್ವಾಂಸರ ಒಕ್ಕೂಟ ತಿಳಿಸಿದೆ.

ಮಂಗಳೂರು: ಮಂದಿರ,ಮಸೀದಿ, ಚರ್ಚು ಮುಂತಾದ ಆರಾಧನಾಲಯಗಳ ಪ್ರಾರ್ಥನೆಗಳಲ್ಲಿ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ವನ್ನು ಬಳಸುವ ವಿಚಾರವು ವಿವಿಧ ಸಮುದಾಯಗಳ ನಡುವಿನ ಶಾಂತಿ ಸಾಮರಸ್ಯವನ್ನು ಕದಡುವ ಮಟ್ಟಕ್ಕೆ ತಲುಪದಂತೆ ಜಾಗ್ರತೆ ವಹಿಸಬೇಕೆಂದು ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯ ಸಮಿತಿ ಸರ್ವ ಧರ್ಮೀಯರಲ್ಲಿ ವಿನಂತಿಸಿದೆ.

ಮಂಗಳೂರಿನಲ್ಲಿ ಸೇರಿದ ಸಮಿತಿ ಸಭೆಯಲ್ಲಿ ಅಝಾನ್‌ಗಾಗಿ ಧ್ವನಿವರ್ಧಕವನ್ನು ಬಳಸುವ ಬಗ್ಗೆ ಹುಟ್ಟು ಹಾಕಲಾದ ವಿವಾದಗಳ ಕುರಿತಂತೆ ಗಂಭೀರ ಚರ್ಚೆ ನಡೆಸಲಾಯಿತು. ಧ್ವನಿವರ್ಧಕದ ಬಳಕೆ ಎಲ್ಲ ಧರ್ಮೀಯರ ಆರಾಧನಾಲಯಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಕವಾಗಿದ್ದು, ಬಹುತೇಕ ಎಲ್ಲ ಸಮುದಾಯಗಳು ಇಂತಹ ವಿಷಯಗಳ ಅಗತ್ಯಗಳನ್ನು ಮನಗಂಡು ಪರಸ್ಪರ ಅರ್ಥೈಸಿಕೊಂಡು ಹೊಂದಾಣಿಕೆಯೊಂದಿಗೆ ಮುಂದುವರೆಯುತ್ತಿವೆ.

ಈ ಮೂಲಕ ಸಾರ್ವಜನಿಕರು ತೊಂದರೆಗೀಡಾಗುವ ಸನ್ನಿವೇಶಗಳು ಸೃಷ್ಟಿಯಾಗದಂತೆ ನ್ಯಾಯಾಲಯಗಳು ಬೇಕಾದ ಮಾರ್ಗಸೂಚಿಗಳನ್ನು ನೀಡಿವೆ. ಇವುಗಳನ್ನೆಲ್ಲ ಗಮನದಲ್ಲಿಟ್ಟು, ಆರಾಧನಾಲಯಗಳ ಆಸುಪಾಸಿನಲ್ಲಿರುವ ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿಕೊಂಡು ಧ್ವನಿವರ್ಧಕವನ್ನು ಬಳಸಬೇಕೆಂದು ಕರ್ನಾಟಕದ ಸುನ್ನೀ ವಿದ್ವಾಂಸರ ಒಕ್ಕೂಟ ತಿಳಿಸಿದೆ.

ಅಝಾನ್ ಎನ್ನುವುದು ನಮಾಝ್ನ ಸಮಯಾರಂಭದಲ್ಲಿ ನೀಡುವ ಕರೆಯಾಗಿದ್ದು, ಪ್ರಭಾತದ ಆರಂಭದ ಸುಬುಹಿ ಅಝಾನನ್ನು ಆರು ಗಂಟೆಗೆ ಕೊಡಬೇಕೆಂಬ ವಾದವನ್ನು ಪುರಸ್ಕರಿಸಲು ಸಾಧ್ಯವಲ್ಲವೆಂದು ಮುಶಾವರಾ ಸಭೆಯು ಅಭಿಪ್ರಾಯಪಟ್ಟಿತು.

ಸಭೆಯಲ್ಲಿ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೌಲಾನಾ ಹುಸೈನ್ ಸಅದಿ ಕೆಸಿರೋಡ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ವಂದಿಸಿದರು.

error: Content is protected !! Not allowed copy content from janadhvani.com