ಬೆಂಗಳೂರು,ಏ.25: ಜಗತ್ತಿನ ಹಲವು ದೇಶಗಳನ್ನ ತಲ್ಲಣಿಸಿರುವ ಕೊರೊನಾ ವೈರಾಣು ಭಾರತದಲ್ಲೂ ಅನಾಹುತ ಸೃಷ್ಟಿಸುವ ಸೂಚನೆ ನೀಡುತ್ತಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ಕೊರೊನಾ ಹಾಟ್ಸ್ಪಾಟ್ ಆಗಿದ್ದು, ಇತರ ರಾಜ್ಯಗಳಲ್ಲು ಸೋಂಕಿತರ ಸಂಖ್ಯೆ ಏರುಗತಿಯ ಹಾದಿ ಹಿಡಿದಿದೆ. ಈ ನಡುವೆ ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಇವತ್ತು ಸಿಎಂ ಅವರ ನೇತೃತ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆಗಮನ ಸೂಚನೆ ಹಿನ್ನೆಲೆಯಲ್ಲಿ ಸಭೆ ಮಾಡಲಾಯಿತು. ಸಭೆಯಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಇವತ್ತು ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಆದರೆ ಈ ಬಗ್ಗೆ ದಂಡ ವಿಧಿಸಲು ನಿರ್ಧಾರ ಮಾಡಿಲ್ಲ. ಅಲ್ಲದೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರೋ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರಿನಲ್ಲಿ 1.9% ಪಾಸಿಟಿವಿಟಿ ದರ ದಾಖಲಾಗಿದೆ. ಲಸಿಕೆ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲು ಜನತೆಗೆ ಮನವಿ ಮಾಡುತ್ತೇವೆ. ನಾಲ್ಕನೇ ಅಲೆವರೆಗೂ ಕಾಯುವುದು ಬೇಡ. ಲಸಿಕೆ ಹಾಕಿಸಿಕೊಳ್ಳಿ. ದಕ್ಷಿಣ ಕೊರಿಯಾ, ಥೈಲ್ಯಾಂಡ್, ಜಪಾನ್ ಗಳಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ವಹಿಸಲು ಏರ್‌ಪೋರ್ಟ್‌ಗಳಲ್ಲಿ ಸೂಚನೆ ನೀಡಲಾಗಿದೆ ಎಂದರು.