ದುಬೈ: ಧಾರ್ಮಿಕ, ಲೌಖಿಕ ಸಮನ್ವಯ ವಿದ್ಯಾಸಂಸ್ಥೆಯಾದ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್- ಮಂಜನಾಡಿ ಇದರ ಬೆಳ್ಳಿ ಹಬ್ಬ ಸಮಾರಂಭವು ಅಲ್ ಮದಿನಾ ಕ್ಯಾಂಪಸ್’ನಲ್ಲಿ ವಿಜೃಂಭನೆಯಿಂದ ನಡೆಯಲಿದೆ.
ಪ್ರಸ್ತುತ ಸಂಸ್ಥೆ ವಿಧ್ಯಾಭ್ಯಾಸ ಕ್ಷೇತ್ರದಲ್ಲಿ ತನ್ನ 25 ಸಂವತ್ಸರಗಳನ್ನು ನಿರಾಯಾಸವಾಗಿ ಉತ್ತಮ ಫಲಿತಾಂಶದೊಂದಿಗೆ ಪೂರ್ಣಗೊಳಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ನೂರಾರು ಪದವೀಧರರನ್ನು ಸಮಾಜಕ್ಕೆ ಧಾರೆ ಎರೆದಿದೆ.
ಮರ್ಝೂಕಿ ಬಿರುದುದಾರಿಗಳಾದ ವಿಧ್ವಾಂಸರು ರಾಜ್ಯದ ವಿವಿದೆಡೆ ಧರ್ಮಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದು ವೈದ್ಯರು, ಇಂಜಿನಿಯರ್’ಗಳು ಧಾರಾಳವಾಗಿ ಈ ಸಂಸ್ಥೆಯಲ್ಲಿ ವಿದ್ಯೆ ಕರಗತಗೊಳಿಸಿ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿಫ್ಲುಲ್ ಖುರ್’ಆನ್, ಮಹಿಳಾ ಕಾಲೇಜು, ಮದ್ರಸಾ, ದ’ಅವಾ ಕಾಲೇಜು, ಶರೀಅತ್ ಕಾಲೇಜು, ಅನಾಥ-ನಿರ್ಗತಿಕರ ಮಂದಿರ, ಉತ್ತರ ಕರ್ನಾಟಕದ ದ’ಅವಾ ಶಿಕ್ಷಣ ಹಾಗೂ ವಸತಿ ಈ ರೀತಿ ಹತ್ತು ಹಲವು ವಿಭಾಗಗಳು ಪ್ರಸ್ತುತ ಸಂಸ್ಥೆಯಲ್ಲಿ ಕಾರ್ಯನಿರತವಾಗಿದೆ.
ಜೀವ ಕಾರುಣ್ಯ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾ ಬಂದಿರುವ ಸಂಸ್ಥೆಯು ಬಡವ, ಅನಾಥ ನಿರ್ಗತಿಕರ ಅಭಯ ಕೇಂದ್ರವಾಗಿ ಮಾರ್ಪಟ್ಟಿದೆ.
ಈ ಬೃಹತ್ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಪ್ರಚಾರ ಸಮಾರಂಭವು ಇದೇ ಬರುವ ದಿನಾಂಕ 20 ಎಪ್ರಿಲ್ 2018 ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ದುಬೈ ಅಲ್-ಫಹೀದಿ ಮೆಟ್ರೋ ಸ್ಟೇಷನ್ ಬಳಿ ಇರುವ ಅಲ್ ಮುಸಲ್ಲ ಟವರ್ ಆಡಿಟೋರಿಯಂನಲ್ಲಿ ಅಲ್ ಮದೀನಾ ದುಬೈ ಸಮಿತಿಯು ಹಮ್ಮಿಕೊಂಡಿದೆ.
ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ, ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮಾ ಕೂರಾ ತಙಳ್, ಯುವ ವಾಗ್ಮಿ ಹಂಝ ಮಿಸ್ಬಾಹಿ ಒಟ್ಟಪದವು ಹಾಗೂ ಇನ್ನಿತರ ಉಲಮಾ, ಉಮರಾ ನೇತಾರರು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಬೆಳ್ಳಿಹಬ್ಬದ ಪ್ರಚಾರ ಸಭೆಗಳು ಜಿಸಿಸಿಯ ಎಲ್ಲಾ ರಾಷ್ಟ್ರಗಳಲ್ಲಿ ನಡೆಯಲಿದ್ದು ದುಬೈನಲ್ಲಿ ನಡೆಯುವ ಸಮಾರಂಭವು ಮೊತ್ತಮೊದಲನೆಯದಾಗಿದೆ. ಆದ್ದರಿಂದ ಎಲ್ಲಾ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭದ ಯಶಸ್ವಿಗಾಗಿ ಕಾರ್ಯಾಚರಿಸುವಂತೆ ಅಲ್ ಮದೀನಾ ದುಬೈ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.