ಬೆಂಗಳೂರು: 2023ರ ಚುನಾವಣೆಗೆ ತಾಲೀಮು ಆರಂಭವಾಗಿದ್ದು, ಸಾಲು ಸಾಲು ದೆಹಲಿ ನಾಯಕರು ಬೆಂಗಳೂರಿಗೆ ಆಗಮಿಸ್ತಿದ್ದಾರೆ. ನಿನ್ನೆ ಆಮ್ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಬಂದಿಳಿದಿದ್ದು, ಇಂದು ಕಾರ್ಯಕರ್ತರ ಜೊತೆಗೆ ಸಭೆ ನಡೆಸಲಿದ್ದಾರೆ. ದೆಹಲಿಯಿಂದ ದೇವನಹಳ್ಳಿ ಏರ್ಪೋರ್ಟ್ಗೆ ಆಗಮಿಸಿದ ಕೇಜ್ರಿವಾಲ್ರನ್ನ ಪಕ್ಷದ ಕಾರ್ಯಕರ್ತರು ಹೂವಿನ ಹಾರ ಹಾಕಿ ಸ್ವಾಗತಿಸಿದ್ರು. ಇನ್ನು ಕ್ರೇಜಿವಾಲ್ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಉಳಿದು ಮುಂದಿನ ಚುನಾವಣೆಗೆ ತಂತ್ರ ರೂಪಿಸಲಿದ್ದಾರೆ.
ದೆಹಲಿ, ಪಂಜಾಬ್ ಬಳಿಕ ಆಮ್ ಆದ್ಮಿ ನಾಯಕರ ಚಿತ್ತ ಕರ್ನಾಟಕದತ್ತ ತಿರುಗಿದ್ದು, ಮುಂಬರುವ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರಲು ಈಗಿನಿಂದಲೇ ರಣತಂತ್ರ ರಚನೆ ಮಾಡಲು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘದೊಂದಿಗೆ ಚುನಾವಣಾ ಪೂರ್ವ ಮೈತ್ರಿಗೆ ಎಎಪಿ ಮುಂದಾಗಿದ್ದು, ಇಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶವನ್ನ ಉದ್ದೇಶಿಸಿ ಆಪ್ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾತನಾಡಲಿದ್ದು, ಬೇರೆ ಜಿಲ್ಲೆಗಳಿಂದ ಬಸ್ಗಳಲ್ಲಿ ರೈತರು ಆಗಮಿಸಿದ್ದಾರೆ.
ರಾಜ್ಯದ ಭ್ರಷ್ಟ ಸರ್ಕಾರದಿಂದ ಬೇಸತ್ತ ರೈತರು ಮತ್ತು ಜನ ಸಾಮಾನ್ಯರು ಆಪ್ ನ್ನು ಬರಮಾಡಿಕೊಳ್ಳಲು ಮುಂದಾಗಿದ್ದು, ಮುಂದಿನ ಚುನಾವಣೆಯಲ್ಲಿ ಜನವಿರೋಧಿ ಸರ್ಕಾರವನ್ನು ಕಿತ್ತೆಸೆದು, ಆಪ್ ನ್ನು ಅಧಿಕಾರಕ್ಕೆ ತರಲು ರಾಜ್ಯದ ಜನತೆ ಒಲವು ತೋರುತ್ತಿದ್ದಾರೆ. ದೆಹಲಿ ಮತ್ತು ಪಂಜಾಬ್ ನಲ್ಲಿ ಚುನಾವಣೆ ವೇಳೆ ನೀಡಿದ ಭರವಸೆಯನ್ನು ಈಡೇರಿಸುತ್ತಿದ್ದು, ಪಂಜಾಬ್ ನಲ್ಲಿ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಮುಂದಾಗಿದೆ.









