ಉಡುಪಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದ ವ್ಯಕ್ತಿ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ.
ನನ್ನ ಆತ್ಮಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿ ಸಂದೇಶ ರವಾನಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಚಿವರ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದ್ದು, ಉಡುಪಿ ಕೆಎಸ್ಆರ್ಟಿಸಿ ಸಮೀಪದ ಶಾಂಭವಿ ಹೋಟೆಲ್ನ ರೂಮ್ವೊಂದರಲ್ಲಿ ಮೃತದೇಹ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ ಅವರ ಮೊಬೈಲ್ ಲೊಕೇಷನ್ ಉಡುಪಿಯಲ್ಲಿ ಇರುವ ಬಗ್ಗೆ ಪತ್ತೆಯಾಗಿತ್ತು.ಕೆಲ ಮಾಧ್ಯಮ ಪ್ರತಿನಿಧಿಗಳ ಮೊಬೈಲ್ಗೆ ಡೆತ್ನೋಟ್ ವಾಟ್ಸ್ ಆಪ್ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದರು.
‘ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ’ ಎಂದು ವಾಟ್ಸ್ ಆ್ಯಪ್ ಮೆಸೇಜ್ನಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ್ ಉಲ್ಲೇಖಿಸಿದ್ದಾರೆ. ಡೆತ್ನೋಟ್ ಮೆಸೇಜ್ ಮಾಹಿತಿ ಬೆನ್ನಲ್ಲೇ ಸಂತೋಷ ಪಾಟೀಲ್ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಅವರ ಮೊಬೈಲ್ ಉಡುಪಿಯಲ್ಲಿ ಆ್ಯಕ್ಟಿವ್ ಇದೆ ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು.
ಸಂತೋಷ್ ಪಟೀಲ್ ಅವರು ನಿನ್ನೆ ಸಂಜೆ ಉಡುಪಿಗೆ ಬಂದು ಶಾಂಭವಿ ಹೋಟೆಲ್ನ 207 ಸಂಖ್ಯೆಯ ರೂಮ್ ಪಡೆದುಕೊಂಡಿದ್ದರು. ಅವರ ಸ್ನೇಹಿತರಾದ ಪ್ರಶಾಂತ್ ಮತ್ತು ಸಂತೋಷ್ ಎಂಬವರು ಪಕ್ಕದ 209 ಸಂಖ್ಯೆಯ ರೂಮ್ ನಲ್ಲಿ ಉಳಿದುಕೊಂಡಿದ್ದರು ಎಂದು ಹೇಳಲಾಗಿದ್ದು, ಪೊಲೀಸರು ಸಂತೋಷ್ ಅವರ ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ.ಸ್ಥಳಕ್ಕೆ ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ ಭೇಟಿ ನೀಡಿದ್ದಾರೆ.
ಸಂತೋಷ್ ಕೆ ಪಾಟೀಲ್ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ರಾಜ್ಯದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿ ದೂರು ನೀಡಿದ್ದರು.
ವೃತ್ತಿಯಲ್ಲಿ ಸಿವಿಲ್ ಗುತ್ತಿಗೆದಾರರಾಗಿರುವ ಸಂತೋಷ ಪಾಟೀಲ್, ತನ್ನ ಬಾಕಿ ಬಿಲ್ ಮೊತ್ತವಾದ ರೂ. 4 ಕೋಟಿ ಪಾವತಿಸಲು ಸಚಿವರು ಮತ್ತು ಅವರ ಸಹವರ್ತಿಗಳು ಕಮಿಷನ್ ಬೇಡಿಕೆಯಿಟ್ಟಿದ್ದಾರೆಂದು ಪಾಟೀಲ್ ಪತ್ರದಲ್ಲಿ ಆರೋಪಿಸಿದ್ದರು.
ಸಚಿವ ಈಶ್ವರಪ್ಪ ಅವರು 12-02-2021ರಂದು ಕೆಲವೊಂದು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ತಮಗೆ ಸೂಚಿಸಿದ್ದರೆಂದು ಹಾಗೂ ಅವರನ್ನು ನಂಬಿ ಅಂದಾಜು ರೂ. 4 ಕೋಟಿ ವೆಚ್ಚದ 108 ಗೂ ಅಧಿಕ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು ಎಂದು ಪತ್ರದಲ್ಲಿ ಹೇಳಲಾಗಿತ್ತು. ಕಾಮಗಾರಿ ಪೂರ್ಣಗೊಂಡು ಒಂದು ವರ್ಷಕ್ಕಿಂತ ಮೇಲಾಗಿದ್ದರೂ ಯಾವುದೇ ವರ್ಕ್ ಆರ್ಡರ್ ಅಥವಾ ಹಣವೂ ಸಂದಾಯವಾಗಿಲ್ಲ’ ಎಂದು ಪಾಟೀಲ್ ತಮ್ಮ ಪತ್ರದಲ್ಲಿ ದೂರಿದ್ದರು.