janadhvani

Kannada Online News Paper

‘ಕಾಶ್ಮೀರ್‌ ಫೈಲ್ಸ್‌’  ಸುಳ್ಳಿನ ಸಿನಿಮಾಗಳ ಪೋಸ್ಟರ್‌ ಸಹ ಹಾಕುವುದಿಲ್ಲ- ಕೇಜ್ರಿವಾಲ್‌

ಚಿತ್ರದ ನಿರ್ಮಾಣ ಮಾಡಿರುವವರು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಲಿ. ಉಚಿತವಾಗೇ ಎಲ್ಲರೂ ನೋಡಲು ಸಾಧ್ಯವಾಗುತ್ತದೆ.

ನವದೆಹಲಿ: ಬಿಜೆಪಿ ನಾಯಕರು ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ಪರ ಪ್ರಚಾರ ಮುಂದುವರಿಸಿದ್ದರೆ, ವಿರೋಧ ಪಕ್ಷಗಳ ಕೆಲವು ಮುಖಂಡರು ಕಿಡಿ ಕಾರುತ್ತಿದ್ದಾರೆ. ಆ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಕೇಜ್ರಿವಾಲ್‌ ಅವರನ್ನು ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ ‘ಅರ್ಬನ್‌ ನಕ್ಸಲ್‌’ ಎಂದು ಟೀಕಿಸಿದ್ದಾರೆ.

ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಗ್ಗೆ ಪ್ರಸ್ತಾಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ‘… ಸುಳ್ಳಿನ ಸಿನಿಮಾಗಳ ಪೋಸ್ಟರ್‌ ಸಹ ಹಾಕುವುದಿಲ್ಲ…’ ಎಂದು ಗುರುವಾರ ವಿಧಾನಸಭೆಯಲ್ಲಿ ಹೇಳಿದ್ದರು.

‘ಬಿಜೆಪಿಗರು ದೆಹಲಿಯಲ್ಲಿ ಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ಕೇಳುತ್ತಿದ್ದಾರೆ. ಆ ಚಿತ್ರದ ನಿರ್ಮಾಣ ಮಾಡಿರುವವರು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಬಹುದು. ಇದರಿಂದ ಸಿನಿಮಾವನ್ನು ಉಚಿತವಾಗೇ ನೋಡಲು ಸಾಧ್ಯವಾಗುತ್ತದೆ. ಎಲ್ಲರೂ ಚಿತ್ರವನ್ನು ವೀಕ್ಷಿಸಬಹುದು’ ಎಂದು ಕೇಜ್ರಿವಾಲ್‌ ಅಭಿಪ್ರಾಯ ವ್ಯಕ್ತ‍‍ಪಡಿಸಿದ್ದರು. ಆ ಮಾತಿಗೆ ಇಡೀ ಸದನ ನಗೆಗಡಲಲ್ಲಿ ತೇಲಿತ್ತು.

ಕೇಜ್ರಿವಾಲ್‌ ಅವರು 2016 ‘ನಿಲ್‌ ಬಟ್ಟೆ ಸನ್ನಾಟಾ’ ಮತ್ತು 2019ರಲ್ಲಿ ‘ಸಾಂಡ್‌ ಕಿ ಆಂಖ್’ ಸಿನಿಮಾಗಳಿಗೆ ದೆಹಲಿಯಲ್ಲಿ ತೆರಿಗೆ ವಿನಾಯಿತಿ ನೀಡಿದ್ದರ ಬಗ್ಗೆ ಪ್ರಕಟಿಸಿದ್ದ ಹಳೆಯ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಬಿಜೆಪಿ ನಾಯಕರು ಹಂಚಿಕೊಳ್ಳುತ್ತಿದ್ದಾರೆ. ‘ಕೇಜ್ರಿವಾಲ್‌ ಎಕ್ಸ್‌ಪೋಸ್ಡ್‌’ ಎಂಬ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಕುರಿತು ಮಾತನಾಡುತ್ತ ಕೇಜ್ರಿವಾಲ್‌ ನಗುತ್ತಿರುವ ವಿಡಿಯೊ ಅನ್ನು ಹಂಚಿಕೊಂಡಿರುವ ಅಮಿತ್‌ ಮಾಳವಿಯಾ, ‘ಕೇಜ್ರಿವಾಲ್‌ ಅವರು ಹಿಂದೆ ಆ ಸಿನಿಮಾಗಳನ್ನು ಯುಟ್ಯೂಬ್‌ನಲ್ಲಿ ಹಾಕುವಂತೆ ಏಕೆ ಸಲಹೆ ನೀಡಲಿಲ್ಲ? ದೆಹಲಿಯಲ್ಲಿ ಏಕೆ ತೆರಿಗೆ ವಿನಾಯಿತಿ ನೀಡಲಾಯಿತು?….ಕಾಶ್ಮೀರ್‌ ಫೈಲ್ಸ್‌ ಹಿಂದೂಗಳ ಹತ್ಯೆಗಳ ಕುರಿತಾದುದು, ಹಾಗಾಗಿಯೇ ಈ ಅರ್ಬನ್‌ ನಕ್ಸಲ್‌ಗೆ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ’ ಎಂದು ಮೂದಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಸಚಿವರು, ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಮುಖಂಡರು ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಪರವಾಗಿ ಮಾತನಾಡಿದ್ದಾರೆ. ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಆ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

‘ಬಿಜೆಪಿಯವರು ಸಿನಿಮಾದ ಪೋಸ್ಟರ್‌ಅನ್ನು ಅಂಟಿಸುತ್ತಿದ್ದಾರೆ. ಹಿಟ್ಲರ್‌ ಕೂಡ ತನ್ನ ಗುಲಾಮರಿಗೆ ಉದ್ಯೋಗವನ್ನು ನೀಡಿದ್ದ. ನಿಮಗೆ ಅವರೇನು (ಮೋದಿ) ಕೊಟ್ಟಿದ್ದಾರೆ? ಏನೇ ಆದರೂ ಕೇಜ್ರಿವಾಲ್‌ ನಿಮಗಾಗಿ ಕೆಲಸ ಮಾಡಲು ಸಿದ್ಧ… ‘ ಎಂದು ಕೇಜ್ರಿವಾಲ್‌ ಹೇಳಿದ್ದರು.

error: Content is protected !! Not allowed copy content from janadhvani.com