ನವದೆಹಲಿ: ಕಠುವಾ ಅತ್ಯಾಚಾರ ಪ್ರಕರಣದ ವಿಶೇಷ ತನಿಖಾ ತಂಡವು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಕೆಲವು ವಕೀಲರು ಅಡ್ಡಿಪಡಿಸಿದ್ದು ನ್ಯಾಯದಾನ ಪ್ರಕ್ರಿಯೆಯಲ್ಲಿ ಆದ ಗಂಭೀರ ಲೋಪ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ‘ಇದು ನ್ಯಾಯದ ನಿರಾಕರಣೆ ಅಲ್ಲದೆ ಮತ್ತೇನಲ್ಲ. ವಕೀಲರೇ ಈ ಕೆಲಸ ಮಾಡಬಾರದು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಕೆಲವು ವಕೀಲರ ಮನವಿಯ ಮೇರೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠವು ಪ್ರಕರಣ ದಾಖಲಿಸಿಕೊಂಡಿತು.
‘ಆರೋಪಿ ಅಥವಾ ಸಂತ್ರಸ್ತರಲ್ಲಿ ಯಾರನ್ನೇ ಆಗಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ, ಅದಕ್ಕೆ ಅಡ್ಡಿಪಡಿಸದೇ ಇರುವುದು ವಕೀಲರು ಮತ್ತು ವಕೀಲರ ಸಂಘಗಳ ಪ್ರಾಥಮಿಕ ಕರ್ತವ್ಯ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕಠುವಾ ವಕೀಲರು ತನಿಖಾಧಿಕಾರಿಗಳಿಗೆ ಅಡ್ಡಿಪಡಿಸಿದ ಬಗ್ಗೆ ಏಪ್ರಿಲ್ 19ರಂದು ವಿವರಣೆ ನೀಡುವಂತೆ ಭಾರತೀಯ ವಕೀಲರ ಸಂಘ, ಜಮ್ಮು ಮತ್ತು ಕಾಶ್ಮೀರ ವಕೀಲರ ಸಂಘ, ಕಠುವಾ ಜಿಲ್ಲಾ ವಕೀಲರ ಸಂಘಗಳಿಗೆ ಪೀಠ ಸೂಚನೆ ನೀಡಿದೆ.
ಆರೋಪಪಟ್ಟಿ ಸಲ್ಲಿಸುವುದಕ್ಕೆ ಅಡ್ಡಿಪಡಿಸಿದ್ದು ಅನೈತಿಕತೆಯೇ ಸರಿ. ನ್ಯಾಯಾಂಗ ಪ್ರಕ್ರಿಯೆಗೆ ವಕೀಲರೇ ಅಡ್ಡಿಪಡಿಸುವುದನ್ನು ಕ್ಷಮಿಸಲು ಸಾಧ್ಯವೇ ಇಲ್ಲ
–ಸುಪ್ರೀಂ ಕೋರ್ಟ್