janadhvani

Kannada Online News Paper

ಐತಿಹಾಸಿಕ ಉಳ್ಳಾಲ ಉರೂಸ್ ಸಮಾರಂಭಕ್ಕೆ ಪ್ರೌಢ ಸಮಾಪ್ತಿ

ಉಳ್ಳಾಲ: ದಕ್ಷಿಣ ಭಾರತದ ಅಜ್ಮೀರ್ ಖ್ಯಾತಿಯ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರ 429 ನೇ ವಾರ್ಷಿಕ ಹಾಗು 21 ನೇ ಪಂಚವಾರ್ಷಿಕ ಉಳ್ಳಾಲ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾ.6 2022 ರಂದು ಸಯ್ಯಿದ್ ಮದನಿ ವೇದಿಕೆಯಲ್ಲಿ ನಡೆಯಿತು.

ಉಳ್ಳಾಲದ ಗೌರವಾನ್ವಿತ ಖಾಝಿಯವರಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಅವರ ನೇತೃತ್ವ ಮತ್ತು ದರ್ಗಾ ಸಮಿತಿ ಅಧ್ಯಕ್ಷರಾದ ರಶೀದ್ ಹಾಜಿ ಹಾಗೂ ಉರೂಸ್ ಕಮಿಟಿಯ ಮುಂದಾಳತ್ವದಲ್ಲಿ ಫೆ.10ರಿಂದ ಮಾರ್ಚ್ 06 ರವರೆಗೆ 26 ದಿನ ರಾತ್ರಿಗಳಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಮುದಾಯಿಕವಾದ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ಉರೂಸ್ ಬಹಳ ವಿಜ್ರಂಭಣೆ, ಸಡಗರದಿಂದ ನಡೆಯಿತು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಮನಾಥ ರೈ, ಶಾಸಕರಾದ ಯು. ಟಿ. ಖಾದರ್ ಸಹಿತವಿರುವ ಹಲವಾರು ರಾಜಕೀಯ ಮುಖಂಡರು ಭೇಟಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ದುಆ ನೆರವೇರಿಸಿ ಮಾತನಾಡಿದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್, ಉಳ್ಳಾಲ ಸಹಿತ ಕೇರಳ ಕರ್ನಾಟಕದಾದ್ಯಂತ ಪಸರಿಸಿರುವ ಕಳ್ಳ ತ್ವರೀಕತುಗಾರರ ಬಲೆಗೆ ಬೀಳದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಅವರ ನೇತೃತ್ವದ ನೂರೇ ಅಜ್ಮೀರ್ ಕಾರ್ಯಕ್ರಮವು ಫೆ. 27 ಆದಿತ್ಯವಾರದಂದು ಬಹಳ ವಿಜ್ರಂಭಣೆಯಿಂದ ನಡೆಯಿತು.

ಇತಿಹಾಸ ನಿರ್ಮಿಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿಯ ಗ್ರ್ಯಾಂಡ್ ಎಂಟ್ರಿ

ಮಾರ್ಚ್ 03 ರಂದು ಉಳ್ಳಾಲ ಉರೂಸಿಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಉಸ್ತಾದರ ಗ್ರ್ಯಾಂಡ್ ಎಂಟ್ರಿ ಸುನ್ನೀ ಜನ ಮನಸ್ಸುಗಳನ್ನು ಪುಳಕಿತಗೊಳಿಸಿತು. ಸಾಮಾನ್ಯವಾಗಿ ಆದಿತ್ಯವಾರ ದಿನದಂದು ಜನದಟ್ಟಣೆ ಕಂಡು ಬರುತ್ತಿದ್ದ ಉರೂಸ್ ಸಮಾರಂಭದಲ್ಲಿ, ಸುಲ್ತಾನುಲ್ ಉಲಮಾರ ಭೇಟಿಯ ದಿನ ಜನ ಸಾಗರದಿಂದ ಉಳ್ಳಾಲ ಸ್ತಬ್ಧವಾಯಿತು.ಐತಿಹಾಸಿಕವಾಗಿ ದಾಖಲೆಯ ಪುಟ ಸೇರಿತು.

ಸುನ್ನೀ ಉಲಮಾಗಳು ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶಗಳಲ್ಲಿ ಒಗ್ಗಟ್ಟಾಗಿದ್ದೇವೆ, ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ, ಮುಸ್ಲಿಮರ ಒಗ್ಗಟ್ಟು ಈ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದು ಸುಲ್ತಾನುಲ್ ಉಲಮಾ ಹೇಳಿದರು.

ಸಮಾರಂಭದಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಎನ್ ಕೆ ಎಂ ಶಾಫಿ ಸಅದಿಯವರು ಉಳ್ಳಾಲದ ಉರೂಸ್ ಸಂಬಂಧಿತ ಗೊಂದಲವನ್ನು ನಿವಾರಿಸಿದ ಬಗ್ಗೆ ವಿವರಿಸಿದರು.

ಪ್ರತೀ ರಾತ್ರಿಗಳಲ್ಲಿ ಧಾರ್ಮಿಕ ಮತ ಪ್ರವಚನ

ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್ ರವರ ಭೇಟಿ ಉಳ್ಳಾಲ ಉರೂಸಿಗೆ ಹೆಚ್ಚಿನ ಮೆರುಗು ನೀಡಿತು.ಅವರು ಉಳ್ಳಾಲ ಉರೂಸಿನಲ್ಲಿ ದುಆ ನೆರವೇರಿಸಿ ಮಾತನಾಡಿದರು.

ಪೇರೋಡ್ ಉಸ್ತಾದ್, ಮೌಲಾನಾ ನಜೀಬ್ ಮೌಲವಿ, ಡಾ. ಫಾರೂಖ್ ನಈಮಿ ಕೊಲ್ಲಂ,ಡಾ. ಅಬ್ದುಲ್ ಹಕೀಂ ಅಝ್ಹರಿ, ರಹ್ಮತುಲ್ಲಾಹ್ ಖಾಸಿಮಿ, ಹಕೀಂ ಸಖಾಫಿ ಪುಲ್ಲಾರ, ಡಾ. ಹುಸೈನ್ ಸಖಾಫಿ ಚುಳ್ಳಿಕೋಡು, ಸಿರಾಜುದ್ದೀನ್ ಖಾಸಿಮಿ ಸಹಿತ ಹಲವಾರು ಸುಪ್ರಸಿದ್ಧ ಖ್ಯಾತ ಪ್ರಭಾಷಣಗಾರರಿಂದ ಮತ ಪ್ರವಚನ ಕಾರ್ಯಕ್ರಮ ನಡೆಯಿತು.

ತಾಜುಲ್ ಉಲಮಾ ಖ.ಸಿ ರವರ ಸುಪುತ್ರರಾದ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಸಹಿತ ಹಲವಾರು ಉಲಮಾ ಉಮರಾ, ಸಾದಾತುಗಳು ಉಪಸ್ಥಿತರಿದ್ದರು.

ಮಾರ್ಚ್ 05 ಸಮಾರೋಪ ಸಮಾರಂಭ ಕಾರ್ಯಕ್ರಮದ ನಂತರ ಸಂದಲ್ ಮೆರವಣಿಗೆ ನಡೆಯಿತು. ಅಂದು ರಾತ್ರಿ ಅನ್ನದಾನ ನೀಡುವ ಪ್ರಕ್ರಿಯೆ ಯಶಸ್ವಿಯಾಗಿ ಪ್ರಾರಂಭಗೊಂಡು ಸುಮಾರು 4 ಲಕ್ಷಕ್ಕೂ ಮಿಕ್ಕವರಿಗೆ ಮಾರ್ಚ್ 06 ರಾತ್ರಿವರೆಗೆ ಅನ್ನದಾನ ಪ್ರಕ್ರಿಯೆ ಮುಂದುವರಿಯಿತು.

ಉರೂಸ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸ್ವಯಂ ಸೇವಕರು, ಆಡಳಿತ ಸಮಿತಿಯ ಸದಸ್ಯರುಗಳು, ಉರೂಸ್ ಸಮಿತಿ ಸದಸ್ಯರುಗಳು ಸಹಿತ ಎಲ್ಲರಿಗೂ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಧನ್ಯವಾದ ತಿಳಿಸಿದರು.