ಮಾಸ್ಕೋ,ಮಾರ್ಚ್ 06: ರಷ್ಯಾ-ಉಕ್ರೇನ್ ಯುದ್ಧವು 11ನೇ ದಿನವೂ ಮುಂದುವರಿಯುತ್ತಿದೆ. ಎರಡೂ ರಾಷ್ಟ್ರಗಳ ಮಧ್ಯೆ 2 ಸುತ್ತಿನ ಮಾತುಕತೆಗಳು ನಡೆದ್ರೂ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ. ರಷ್ಯಾ ಉಕ್ರೇನ್ ಮೇಲೆ ಭಾರಿ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಅನೇಕ ನಗರಗಳು ನಾಶಗೊಂಡಿದ್ದು, ಉಕ್ರೇನ್‌ನಲ್ಲಿ ಅನಿಲ ಪೂರೈಕೆಯು ಸ್ಥಗಿತಗೊಂಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಸಂಬಂಧ ಇದುವರೆಗೆ ಎರಡು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ. ಹೀಗಿರುವಾಗ ಮೂರನೇ ಸುತ್ತಿನ ಮಾತುಕತೆಯ ದಿನಾಂಕವೂ ಹೊರಬಿದ್ದಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಮುಂದಿನ ಸುತ್ತಿನ ಮಾತುಕತೆ ಸೋಮವಾರ ಅಂದರೆ ನಾಳೆ ನಡೆಯಲಿದೆ ಎಂದು ಉಕ್ರೇನಿಯನ್ ಅಧಿಕಾರಿ ಡೇವಿಡ್ ಅರ್ಖಾಮಿಯಾ ಹೇಳಿದ್ದಾರೆ.
ಅರ್ಖಾಮಿಯಾ ಅವರು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿಯ ಸರ್ವೆಂಟ್ ಆಫ್ ದಿ ಪೀಪಲ್ ಪಾರ್ಟಿಯ ಸಂಸದೀಯ ಪಕ್ಷದ ಮುಖ್ಯಸ್ಥರಾಗಿದ್ದು, ರಷ್ಯಾದೊಂದಿಗೆ ಮಾತುಕತೆಗಾಗಿ ನಿಯೋಗದ ಸದಸ್ಯರಾಗಿದ್ದಾರೆ. ಸೋಮವಾರ ಮೂರನೇ ಸುತ್ತಿನ ಮಾತುಕತೆ ನಡೆಯಲಿದ್ದು, ಎರಡೂ ಕಡೆಯವರು ಕದನ ವಿರಾಮ ಮತ್ತು ನಾಗರಿಕರಿಗೆ ಸುರಕ್ಷಿತ ಮಾರ್ಗದ ಕುರಿತು ಮಾತುಕತೆ ನಡೆಸಲು ಪ್ರಯತ್ನಿಸಲಿದ್ದಾರೆ.