ಬೆಳ್ತಂಗಡಿ:ಫೆ.25: ಶಾಂತಿ ನೆಲೆಸಿರುವ ತಾಲೂಕಿನಲ್ಲಿ ನಾವೂರು ಗ್ರಾಮದ ಮುರ ಮಸೀದಿಗೆ ಬಿಯರ್ ಬಾಟಲಿಯನ್ನು ಎಸೆದು ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಕೃತ್ಯವನ್ನು ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಆರೋಪಿಗಳ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿ ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷರಾದ B A ನಝೀರ್ ಬೆಳ್ತಂಗಡಿ ಆಗ್ರಹಿಸಿದ್ದಾರೆ.
ಮಸೀದಿ, ಮಂದಿರ, ಚರ್ಚ್ ಎಲ್ಲವೂ ಪೂಜಾ ಸ್ಥಳವಾಗಿದ್ದು, ಅವರವರ ಧರ್ಮಗಳಲ್ಲಿ ಪ್ರತ್ಯೇಕ ಭಾವನೆಗಳನ್ನು ಹೊಂದಿದೆ. ಎಲ್ಲಾ ಧರ್ಮದ ಪೂಜಾ ಕ್ಷೇತ್ರ ಮತ್ತು ಎಲ್ಲಾ ಜಾತಿಯ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಸಮಾಜವನ್ನು ನಿರ್ಮಿಸಬೇಕೇ ಹೊರತು, ಅಂತಹ ಕೇಂದ್ರಗಳನ್ನು ಅಪವಿತ್ರ ಗೊಳಿಸಿ ಅಶಾಂತಿ ಸೃಷ್ಟಿಸುವ ಹೇಯ ಕೃತ್ಯಕ್ಕೆ ಯಾರೂ ಕೈ ಹಾಕಬಾರದು. ಧಾರ್ಮಿಕ ಕೇಂದ್ರಗಳಲ್ಲಿ ಕೋಮು ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಕೃತ್ಯ ನಡೆಸಿ ಗಲಭೆ ಸೃಷ್ಟಿಸಲು ಪ್ರಯತ್ನಿಸುವ ಕಿಡಿಗೇಡಿಗಳನ್ನು ಬಂಧಿಸಬೇಕು. ತಾಲೂಕಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನವಹಿಸಬೇಕು ಎಂದು ಒತ್ತಾಯಿಸಿದರು.
ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ನ್ಯಾಯದ ನಿರೀಕ್ಷೆಯಲ್ಲಿರುವವರಿಗೆ ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಭರವಸೆಯನ್ನು ಮೂಡಿಸಬೇಕಾದ ಜವಾಬ್ದಾರಿ ಠಾಣಾಧಿಕಾರಿಗಳಲ್ಲಿದೆ. ಆದ್ದರಿಂದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.