ಬೆಂಗಳೂರು: ಶಾಲೆ ಕಾಲೇಜುಗಳಲ್ಲಿ ಸಮವಸ್ತ್ರವಿದ್ದರೂ ಹಿಜಾಬ್ ಧರಿಸಲು ಅವಕಾಶ ನೀಡುವ ಕುರಿತಾದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್, ಗುರುವಾರ ಮಧ್ಯಂತರ ಆದೇಶ ನೀಡಿದೆ. ಈ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನು ಬಳಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹೇಳಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಸೋಮವಾರ (ಫೆ.14) ಮುಂದುವರಿಸಲಾಗುವುದು ಎಂದು ಸಿಜೆ ನೇತೃತ್ವದ ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠ ನೀಡಿದೆ. ಸಂಪೂರ್ಣ ವಿಚಾರಣೆ ಮುಗಿಸಿ ಅಂತಿಮ ಆದೇಶ ನೀಡುವವರೆಗೂ ವಿದ್ಯಾರ್ಥಿಗಳು ಹಿಜಾಬ್ ಅಥವಾ ಶಾಲಿನಂತಹ ಧಾರ್ಮಿಕ ಗುರುತುಗಳನ್ನು ಧರಿಸಿ ಶಾಲೆಗೆ ಹೋಗುವಂತಿಲ್ಲ ಎಂದು ಅದು ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು. ಸೋಮವಾರದಿಂದ ಪ್ರತಿದಿನ ವಿಚಾರಣೆ ನಡೆಸುತ್ತೇವೆ. ಸದ್ಯಕ್ಕೆ ಮಧ್ಯಂತರ ಆದೇಶ ಕೊಡಲು ಇಚ್ಛಿಸುತ್ತೇವೆ. ವಿಚಾರಣೆ ಮುಂದಿಯುವವರೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸಬಾರದು. ರಾಜ್ಯದಲ್ಲಿ ಆದಷ್ಟೂ ಬೇಗ ಶಾಲಾ ಕಾಲೇಜುಗಳು ಮತ್ತೆ ಆರಂಭವಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹೇಳಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್, ಇಸ್ಲಾಂ ಧಾರ್ಮಿಕ ನಂಬಿಕೆಗಳ ಪ್ರಕಾರ ಪತಿ, ತಂದೆ, ಪತಿಯ ತಂದೆ, ಮಕ್ಕಳು ಸೇರಿದಂತೆ ಕೆಲ ನಿರ್ದಿಷ್ಟ ವ್ಯಕ್ತಿಗಳ ಎದುರು ಮಾತ್ರ ಮಹಿಳೆ ಹಿಜಾಬ್ ಧರಿಸದಂತೆ ಕಾಣಿಸಿಕೊಳ್ಳಲು ಅವಕಾಶವಿದೆ. ನಿರ್ದಿಷ್ಟಪಡಿಸಿದ ವ್ಯಕ್ತಿಗಳನ್ನು ಬಿಟ್ಟು ಉಳಿದವರ ಮುಂದೆ ಹಿಜಾಬ್ ಕಡ್ಡಾಯವಾಗಿದೆ. ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ತೀರ್ಪು ಸಹ ಇದಕ್ಕೆ ಪೂರಕವಾಗಿದೆ. ಧರ್ಮಕ್ಕೆ ನಂಬಿಕೆಯೇ ಆಧಾರ ಎಂದು ಹೇಳಿದ ಅವರು ಜೊರಾಷ್ಟ್ರಿಯನ್ ಧರ್ಮದ ನಂಬಿಕೆ ರಾಷ್ಟ್ರಗೀತೆ ಹಾಡಲು ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಸುಪ್ರೀಂಕೋರ್ಟ್ ಸಹ ಗುರುತಿಸಿದೆ ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೋರ್ವ ವಕೀಲ ಸಂಜಯ್ ಹೆಗ್ಡೆ, ಶಾಲೆಗಳಲ್ಲಿ ಮೊದಲು ಸಮವಸ್ತ್ರ ಎಂಬುದು ಇರಲಿಲ್ಲ. ತಮಿಳುನಾಡಿನಲ್ಲಿ ಮೊದಲಿಗೆ ಅದು ಶುರುವಾಯಿತು. 1995ರಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ರೂಪಿಸಿತು. ಸಮವಸ್ತ್ರವನ್ನು 5 ವರ್ಷಗಳಿಗೆ ಒಮ್ಮೆ ಬದಲಿಸಬೇಕು. ಕಾಯ್ದೆಯಲ್ಲಿ ಶಾಲೆಗಳಿಗೆ ಸಮವಸ್ತ್ರ ಸಂಬಂಧ ಕೆಲ ಸೂಚನೆಗಳಿವೆ. ಆದರೆ ಪಿಯು ಕಾಲೇಜುಗಳಿಗೆ ಸಮವಸ್ತ್ರ ಸಂಬಂಧ ಯಾವುದೇ ನಿಯಮಗಳಿಲ್ಲ. ಹೃದಯ ವೈಶಾಲ್ಯತೆ ಇಲ್ಲದೇ ಈ ದೇಶದ ಬೆಳವಣಿಗೆ ಸಾಧ್ಯವಿಲ್ಲ ಎಂದು ಹೇಳಿದರು.