ಕಳಸ, ಫೆ.1: ಪಟ್ಟಣ ಸಮೀಪದ ಕೋಟೆಹೊಳೆ ಎಂಬಲ್ಲಿ ಮದರಸ ತರಗತಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಜೀಪ್ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.
ಮೃತ ಬಾಲಕಿಯು ಪಟ್ಟಣದ ಕಳಶೇಶ್ವರ ನಗರದ ವಜೀರ್ ಅಹ್ಮದ್ ಎಂಬವರ ಪುತ್ರಿ ನಫೀಸಾ (8) ವರ್ಷ ಎಂದು ತಿಳಿದು ಬಂದಿದೆ.
ಮದರಸ ತರಗತಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮೂವರು ಬಾಲಕಿಯರ ಪೈಕಿ ಒಬ್ಬಾಕೆಗೆ ಜೀಪ್ ಢಿಕ್ಕಿ ಹೊಡೆದ ಪರಿಣಾಮ ನಫೀಸಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಜೀಪ್ ಕಳಸ ಪಟ್ಟಣದಿಂದ ಕಳಕೊಡು ಕಡೆಗೆ ಹೋಗುತ್ತಿತ್ತು. ಮಕ್ಕಳು ಮದರಸದಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿದ್ದರು. ಅಪಘಾತ ಎಸಗಿದ ಚಾಲಕನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅಲ್ಲಾಹ್! ಆ ದೃಶ್ಯವೇ ಅಸಹನೀಯ, ಅನೂಹ್ಯ.
ಕಳಸ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ್ದ ಆ ಹುಡುಗಿಯ ಮುಖ ಕಣ್ಣಂಚಿನಿಂದ ಮರೆಯಾಗುತ್ತಿಲ್ಲ. ಎಂದಿನಂತೆ ಇಂದು ರಾತ್ರಿ ಕೂಡ ಮದ್ರಸಕ್ಕೆ ಬಂದಿದ್ದ ಮೂರನೇ ತರಗತಿಯ ಹುಡುಗಿ ಎಂಟೂ ಕಾಲಕ್ಕೆ ಮದ್ರಸ ಬಿಟ್ಟು ತನ್ನ ಅಕ್ಕ ಮತ್ತು ಸೋದರ ಮಾವನ ಜೊತೆ ಮನೆಗೆ ಹೊರಟವಳನ್ನು ವಿಧಿ ಸೇರಿಸಿದ್ದು ಆ ಶವಾಗಾರಕ್ಕೆ!
ರಸ್ತೆಬದಿಯಲ್ಲಿ ಎಚ್ಚರಿಕೆಯಿಂದಲೇ ನಡೆಯುತ್ತಿದ್ದ ಮಕ್ಕಳ ಮೇಲೆ ಜೀಪು ಹರಿಸಿದ್ದ ಬೇಜವಾಬ್ದಾರಿ ಚಾಲಕನೊಬ್ಬನ ನಿರ್ಲಕ್ಷ್ಯದ ಡ್ರೈವಿಂಗ್‌ಗೆ ಬಲಿಯಾದದ್ದು ಎಂಟರ ಹರೆಯದ ಮುದ್ದಿನ ಹುಡುಗಿ ನಫೀಸಾ.
ಮಲಗಿದಂತೆ ಮಲಗಿ ಕಾಣುವ ಆ ಮುದ್ದುಮುಖ, ವಾರ್ತೆ ಕೇಳಿ ತಾಳಲಾರದೆ ಕುಸಿದುಬಿದ್ದ ಅಮ್ಮಅಪ್ಪನ ಆರ್ತನಾದ, ಫೆ.17ಕ್ಕೆ ನಡೆಯಲಿರುವ ತನ್ನ ಮಗಳ ಮದುವೆಗಾಗಿ ಮೊಮ್ಮಗಳಿಗೂ ವಸ್ತ್ರ ವಗೈರೆಗಳನ್ನು ತಂದಿಟ್ಟಿದ್ದ ಅಜ್ಜನ ವಿಲಾಪನಾದ… ಅಲ್ಲಾಹ್! ಆ ದೃಶ್ಯವೇ ಅಸಹನೀಯ, ಅನೂಹ್ಯ.
ಮಗು ಭಾಗ್ಯಶಾಲಿಯೇ ಸರಿ. ಪಾಪವೇನೆಂದು ಗೊತ್ತಿರದ ಪ್ರಾಯದಲ್ಲೇ ಸುರಕ್ಷಿತವಾಗಿ ಬದುಕು ಮುಗಿಸಿ ಹೊರಟು ಹೋಗಿದೆ. ವಿದ್ಯಾರ್ಜನೆಯ ದಾರಿಯಲ್ಲಿ ಸ್ವರ್ಗದ ದಾರಿ ಹಿಡಿದಿದೆ. ಆದರೆ ವಿರಹ ವೇದನೆಯನ್ನು ಅರಗಿಸಲಾಗದೇ ಎದೆಯೊಡೆಯುತ್ತಿರುವ ಹೆತ್ತ ಕರುಳುಗಳನ್ನು ಯಾರಾದರೂ ಹೇಗೆ ತಾನೆ ಸಂತೈಸಿಯಾರು? ಅಲ್ಲಾಹು ಆ ಕುಟುಂಬಕ್ಕೆ ಸಹನೆಯನ್ನು, ಅದಕ್ಕಿರುವ ಅಪಾರವಾದ ಸತ್ಫಲವನ್ನು ಅನುಗ್ರಹಿಸಲಿ. ಸ್ವರ್ಗದಲ್ಲಿ ಹೆತ್ತವರನ್ನು ಸ್ವಾಗತಿಸುವ ಮಗುವನ್ನಾಗಿ ಅಲ್ಲಾಹು ಖಬೂಲ್ ಮಾಡಲಿ.
ಅದೇ ವಾಹನದಿಂದ ಬಡಿಸಿಕೊಂಡರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಅದರ ಅಕ್ಕ ಆಇಶಾಗೆ ಅಲ್ಲಾಹು ಪೂರ್ಣ ಶಮನ ನೀಡಲಿ. ಇಂಥದೊಂದು ಅಸಹನೀಯ ವಿಧಿ ಯಾವ ಹೆತ್ತವರಿಗೂ ಬಾರದಿರಲಿ, ಆಮೀನ್.
Km Siddeeq ಅವರ FB ಪುಟದಿಂದ
https://www.facebook.com/100006435836343/posts/3805854102972413/