ಹೊಸದಿಲ್ಲಿ: ಪಾಸ್‌ಪೋರ್ಟ್ ಪಡೆದುಕೊಳ್ಳಲು ಬಯಸುವವರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಂದು ಖುಷಿ ಸುದ್ದಿ ನೀಡಿದ್ದಾರೆ. ಪಾಸ್‌ಪೋರ್ಟ್ ವಿತರಣೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿರುವ ಕೇಂದ್ರ, 2022-23ರಲ್ಲಿ ಭವಿಷ್ಯದ ತಂತ್ರಜ್ಞಾನಗಳೊಂದಿಗೆ ಇ- ಪಾಸ್‌ಪೋರ್ಟ್ ವಿತರಣೆಯನ್ನು ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಮಂಗಳವಾರ 2022ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದರು. 2022-23 ರಿಂದ ಇ- ಪಾಸ್‌ಪೋರ್ಟ್‌ಗಳ ವಿತರಣೆಯನ್ನು ಭಾರತ ಆರಂಭಿಸಲಿದೆ. 2019ರಲ್ಲಿ ಇದನ್ನು ಮೊದಲು ಪ್ರಕಟಿಸಿದ ಸಂದರ್ಭದಲ್ಲಿ ಕೆಲವು ಹೊಸ ವಿಶೇಷತೆಗಳನ್ನು ಪ್ರಸ್ತಾಪಿಸಲಾಗಿತ್ತು. ಇ- ಪಾಸ್‌ಪೋರ್ಟ್‌ಗಳನ್ನು (E-Passport) ಪರಿಶೀಲಿಸಲು ಕೆಲವೇ ಸೆಕೆಂಡ್ ಸಮಯ ಸಾಕಾಗುತ್ತದೆ.
ಇದರ ಪ್ರಯೋಗಾತ್ಮಕ ಪ್ರತಿಯನ್ನು ಅಮೆರಿಕ ಸರ್ಕಾರ ಮಾನ್ಯ ಮಾಡಿರುವ ಲ್ಯಾಬೊರೇಟರಿಯಲ್ಲಿ ಪರೀಕ್ಷಿಸಲಾಗಿದೆ. ಇ- ಪಾಸ್‌ಪೋರ್ಟ್‌ಗಳು ಮುಂಭಾಗ ಮತ್ತು ಹಿಂಭಾಗದ ಕವರ್‌ಗಳಲ್ಲಿ ದಪ್ಪ ಇರಲಿವೆ. ಹಿಂಬದಿ ಕವರ್‌ನಲ್ಲಿ ಸಣ್ಣ ಸಿಲಿಕಾನ್ ಚಿಪ್ ಇರಲಿದೆ. ಈ ಚಿಪ್ 64 ಕಿಲೋಬೈಟ್ ಮೆಮೋರಿ ಸಂಗ್ರಹ ಸ್ಥಳ ಹೊಂದಿರುತ್ತದೆ.
ಪಾಸ್‌ಪೋರ್ಟ್ ಬಳಕೆದಾರನ ಚಿತ್ರ ಮತ್ತು ಬೆರಳಚ್ಚು ಗುರುತುಗಳನ್ನು ಚಿಪ್ ಒಳಗೆ ಸಂಗ್ರಹಿಸಿ ಇರಿಸಲಾಗಿರುತ್ತದೆ. ಇದು ಒಟ್ಟು 30 ಪ್ರಯಾಣದ ದಾಖಲಾತಿಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಇ-ಪಾಸ್‌ಪೋರ್ಟ್ ವಿತರಣೆಯು ನಾಗರಿಕ ಅನುಕೂಲತೆಯನ್ನು ಹೆಚ್ಚಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಮೈಕ್ರೋ ಚಿಪ್ ಅನ್ನು ಹೊಂದಿರುವ ಪಾಸ್‌ಪೋರ್ಟ್, ಪಾಸ್‌ಪೋರ್ಟ್‌ದಾರರ ಬಯೊಮೆಟ್ರಿಕ್ ಡೇಟಾ, ಭದ್ರತೆಯ ಅಂಶಗಳನ್ನು ಒಳಗೊಳ್ಳಲಿದೆ. ಪಾಸ್‌ಪೋರ್ಟ್‌ದಾರರ ಫೊಟೋ, ಬೆರಳಚ್ಚು, ಸಹಿ ಇತ್ಯಾದಿ ಡೇಟಾಗಳನ್ನು ಒಳಗೊಳ್ಳಲಿದೆ. ಹೀಗಾಗಿ ಅನಧಿಕೃತವಾಗಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಮೂಲಕ ( ಆರ್‌ಎಫ್‌ಐಡಿ) ಡೇಟಾ ವರ್ಗಾವಣೆ ಸಾಧ್ಯವಿಲ್ಲ.
ಇ – ಪಾಸ್‌ಪೋರ್ಟ್‌ನಿಂದ ಜನತೆಗೆ ವಿದೇಶ ಸಂಚಾರದ ವೇಳೆ ಅನುಕೂಲವಾಗಲಿದೆ. ಐಡೆಂಟಿಟಿ ಸೋರಿಕೆ, ಫೋರ್ಜರಿಯನ್ನು ಇದರಿಂದ ತಡೆಯಬಹುದು. ನಾಸಿಕ್‌ನಲ್ಲಿರುವ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಲ್ಲಿ ಈ ಪಾಸ್‌ಪೋರ್ಟ್‌ಗಳನ್ನು ತಯಾರಿಸಲಾಗುತ್ತದೆ.
ಈಗ ಪಾಸ್‌ಪೋರ್ಟ್‌ಗಳು ಮುದ್ರಿತ ಬುಕ್‌ಲೆಟ್‌ಗಳ ರೂಪದಲ್ಲಿದೆ. ಕೇಂದ್ರ ಸರಕಾರ ಆರಂಭಿಕ ಹಂತದಲ್ಲಿ 20,000 ಅಧಿಕಾರಿಗಳು ಮತ್ತು ರಾಜ ತಾಂತ್ರಿಕರಿಗೆ ಇ – ಪಾಸ್‌ಪೋರ್ಟ್‌ಗಳನ್ನು ವಿತರಿಸುತ್ತಿದೆ. ಇತರರು ಮುದ್ರಿತ ಪಾಸ್‌ಪೋರ್ಟ್‌ಗಳನ್ನು ಎಂದಿನಂತೆ ಬಳಸಬಹುದು. ಇ – ಪಾಸ್‌ಪೋರ್ಟ್‌ಗಳು ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಶನ್ ಆರ್ಗನೈಸೇಶನ್‌ನ (ಐಸಿಎಒ) ಮಾನದಂಡವನ್ನು ಪೂರೈಸುತ್ತಿದ್ದು, ಇದನ್ನು ನಾಶಪಡಿಸುವುದು ಸುಲಭವಲ್ಲ. ಭಾರತದಲ್ಲಿ ವಿದೇಶಾಂಗ ವ್ಯವಹಾರ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ 36 ಪಾಸ್‌ಪೋರ್ಟ್ ಕಚೇರಿಗಳು ಇ -ಪಾಸ್‌ಪೋರ್ಟ್‌ಗಳನ್ನು ವಿತರಿಸಲಿವೆ.
ಭಾರತದಲ್ಲಿ 36 ಪಾಸ್‌ಪೋರ್ಟ್ ಕಚೇರಿಗಳು, 93 ಪಾಸ್‌ಪೋರ್ಟ್ ಕೇಂದ್ರಗಳು, 426 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಸೇರಿ ಒಟ್ಟು 555 ಪಾಸ್‌ಪೋರ್ಟ್ ಕೇಂದ್ರಗಳು ಇವೆ. ಇ – ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನ ಸರಕಾರದ ವೆಬ್‌ಸೈಟ್ ಮೂಲಕ ಸಲ್ಲಿಸುವ ವಿಧಾನದಲ್ಲಿಯೇ ಇರಲಿದೆ.