janadhvani

Kannada Online News Paper

ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ- ಮತ್ತೆ ಒಂದು ತಿಂಗಳು ವಿಸ್ತರಣೆ

ಏರ್ ಬಬಲ್ ಒಪ್ಪಂದಗಳ ಅಡಿಯಲ್ಲಿ ವಿಮಾನಯಾನ ಸೇವೆ ಮುಂದುವರಿಯಲಿದೆ.

ನವದೆಹಲಿ: ಕೊರೋನಾ ಹರಡುವ ಭೀತಿಯಿಂದಾಗಿ ಕಳೆದ ಎರಡು ವರ್ಷದಿಂದ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದೀಗ ಅದನ್ನು 2022ರ ಫೆಬ್ರವರಿ 28 ರವರೆಗೆ ವಿಸ್ತರಿಸಲಾಗಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೊರಡಿಸಿರುವ ಆದೇಶದ ಪ್ರಕಾರ, ಕೊರೊನಾ ಪ್ರಕರಣ ವಿಶ್ವದಲ್ಲಿ ಮತ್ತೆ ಹೆಚ್ಚಾಗುತ್ತಿರುವುದರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು 2022, ಫೆಬ್ರವರಿ 28ರ ವರೆಗೆ ವಿಸ್ತರಿಸಲಾಗಿದೆ ಎಂದು ಡಿಜಿಸಿಎ ಇಂದು ಅಧಿಸೂಚನೆ ಹೊರಡಿಸಿದೆ.

ಕೊರೊನಾ ಮೂರನೇ ಅಲೆ ಭಾರತದಲ್ಲಿ ಈಗಾಗಲೇ ಕಾಣಿಸಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆ ವಿಧಿಸಿದ ನಿರ್ಬಂಧ ವಿಸ್ತರಿಸಲು ನಿರ್ಧರಿಸಿದ್ದು, ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ನಿಗದಿತ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಈ ನಿರ್ಬಂಧವು, ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ನಿಯಂತ್ರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಎಲ್ಲಾ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಆ ಬಳಿಕ ಡಿಜಿಸಿಎ ಕಳೆದ ಡಿಸೆಂಬರ್ 15 ರಿಂದ ನಿಗದಿತ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲು ನಿರ್ಧರಿಸಿತ್ತು. ಈ ಸಂದರ್ಭ ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಇದೀಗ ವಿಶ್ವದ ಹಲವು ದೇಶಗಳು ಮತ್ತೆ ಕೊರೊನಾ ಸೋಂಕಿಗೆ ತತ್ತರಿಸಿದೆ ಹಾಗಾಗಿ ಭಾರತದಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆಯ ನಿರ್ಬಂಧವನ್ನು ವಿಸ್ತರಿಸಿದೆ.

ಈ ನಡುವೆ ಭಾರತವು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‍ಡಮ್, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಎರಡು ದೇಶಗಳು ವಿಶೇಷ ಅಂತರಾಷ್ಟ್ರೀಯ ವಿಮಾನಗಳನ್ನು ತಮ್ಮ ವಿಮಾನಯಾನ ಸಂಸ್ಥೆಗಳು ಪ್ರಾಂತ್ಯಗಳ ನಡುವೆ ನಿರ್ವಹಿಸಬಹುದಾಗಿದೆ.

error: Content is protected !! Not allowed copy content from janadhvani.com