janadhvani

Kannada Online News Paper

ಮಕ್ಕಾ- ಮದೀನಾ ಹರಂಗಳಲ್ಲಿ ಕೋವಿಡ್ ನಿರ್ಬಂಧಗಳು ಮರುಸ್ಥಾಪನೆ

ದೇಶಾದ್ಯಂತ ಎಲ್ಲಾ ಮಸೀದಿಗಳಲ್ಲಿ ಕೋವಿಡ್ ಪ್ರೋಟೋಕಾಲ್ ಪಾಲಿಸುವಂತೆ ಸೂಚನೆ

ಜಿದ್ದಾ : ಪವಿತ್ರ ಮಕ್ಕಾ ಮತ್ತು ಮದೀನಾ ಹರಮ್ ಮಸೀದಿಗಳಲ್ಲಿ ಕೋವಿಡ್ ಪ್ರೋಟೋಕಾಲ್‌ಗಳಲ್ಲಿ ನೀಡಲಾಗಿದ್ದ ಕೆಲವು ವಿನಾಯಿತಿಯನ್ನು ಹಿಂಪಡೆಯಲಾಗಿದೆ. ಪ್ರಾರ್ಥನೆಗೆ ಆಗಮಿಸುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಹರಮ್ ಕಾರ್ಯಾಲಯ ಸಲಹೆ ನೀಡಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಪುನಃಸ್ಥಾಪಿಸಲಾಗಿದೆ. ಬಹುಪಾಲು ಜನರು ಲಸಿಕೆಯನ್ನು ಸ್ವೀಕರಿಸಿದ್ದಾರೆ ಮತ್ತು ಕೋವಿಡ್ ಪ್ರಕರಣಗಳು ತೀವ್ರವಾಗಿ ಇಳಿಮುಖವಾಗುತ್ತಿದ್ದ ಸಂದರ್ಭದಲ್ಲಿ ಮಕ್ಕಾ ಮತ್ತು ಮದೀನಾದ ಹರಂಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು.

ಇದೀಗ ದೇಶದಲ್ಲಿ ಮತ್ತೆ ರೂಪಾಂತರಿ ಕೋವಿಡ್ ಹೊಸ ಅಲೆಯ ಹಿನ್ನೆಲೆಯಲ್ಲಿ, ನಿರ್ಬಂಧಗಳನ್ನು ಪುನಃಸ್ಥಾಪಿಸಲು ಪ್ರಾರಂಭಿಸಿದೆ. ಗುರುವಾರ ಬೆಳಗ್ಗೆ 7 ಗಂಟೆಯಿಂದ ಉಮ್ರಾ ಯಾತ್ರಿಕರು ಮತ್ತು ಪ್ರಾರ್ಥನೆಗೆ ಆಗಮಿಸುವವರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.

ಪ್ರಾರ್ಥನೆ, ತವಾಫ್ ಮತ್ತು ಸಅ್ ಯ್ ಮೇಲಿನ ನಿರ್ಬಂಧಗಳನ್ನು ನಾಳೆಯಿಂದ ಪುನಃಸ್ಥಾಪಿಸಲಾಗುತ್ತದೆ. ಹರಂ ತಲುಪುವವರು ಪರವಾನಗಿಯಲ್ಲಿ ತಿಳಿಸಲಾದ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

ಹರಂಗಳಲ್ಲಿನ ನಿರ್ಬಂಧಗಳು ಉದ್ಯೋಗಿಗಳಿಗೂ ಅನ್ವಯಿಸುತ್ತವೆ. ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ದೇಶಾದ್ಯಂತ ಎಲ್ಲಾ ಮಸೀದಿಗಳು ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಶಿಫಾರಸು ಮಾಡಿದೆ. ಮಸೀದಿಗಳಿಗೆ ಹಾಜರಾಗುವವರು ಕೋವಿಡ್ ತಡೆಗಟ್ಟುವ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಮಸೀದಿಯ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

error: Content is protected !! Not allowed copy content from janadhvani.com