ಉತ್ತರಾಖಂಡ: ಗುರುವಾರ ರಾತ್ರಿ, ಉತ್ತರಾಖಂಡ ಪೊಲೀಸರು, ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಮತ್ತು ತಮ್ಮ ಹೆಸರನ್ನು ಜಿತೇಂದ್ರ ನಾರಾಯಣ ತ್ಯಾಗಿ ಎಂದು ಬದಲಾಯಿಸಿಕೊಂಡಿರುವ ವಸೀಮ್ ರಿಝ್ವಿ ವಿರುದ್ಧ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ತನಿಖೆ ಆರಂಭವಾದ ನಂತರ ಇನ್ನಷ್ಟು ಹೆಸರುಗಳನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರು ನರಸಿಂಗಾನಂದರ ಹೆಸರು ಸೇರಿಸದಿರುವುದು ಆಶ್ಚರ್ಯಕರವಾಗಿದೆ.
ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್‌ನಲ್ಲಿ ಕೇಳಿಬಂದ ಮುಸ್ಲಿಮರ ವಿರುದ್ಧ ದ್ವೇಷಭಾಷಣಗಳಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಇದು ಕಾನೂನು ಬಾಹಿರ ಎಂದಿರುವ ಉತ್ತರಖಂಡ ಪೊಲೀಸರು ಧಾರ್ಮಿಕ ದ್ವೇಷ ಬಿತ್ತುವ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
I’ve instructed AIMIM #Uttarakhand Pres @DrNayyerkazmi1 to file a police complaint against #HaridwarHateAssembly. It’s a clear case of incitement to genocide. Our team has attempted to file it today but officers in Roorkee were unavailable due to other engagements 1/n pic.twitter.com/Pwp2JhjJY3
— Asaduddin Owaisi (@asadowaisi) December 23, 2021
ಧರ್ಮ ಸಂಸದ್ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ವಿವಾದಿತ ಉಗ್ರ ಹಿಂದುತ್ವ ನಾಯಕ ನರಸಿಂಗಾನಂದ ಗಿರಿ ಅವರು ಉದ್ರೇಕಕಾರಿ ಹೇಳಿಕೆಗಳನ್ನು ನೀಡಿದ್ದರು. ಭಯೋತ್ಪಾದಕ ಸಂಘಟನೆಯಾದ ಎಲ್‌ಟಿಟಿಇ ನಾಯಕ ಪ್ರಭಾಕರನ್ ತರ ಆಗುವಂತೆ ಹಿಂದೂ ಯುವಕರಿಗೆ ಕರೆ ನೀಡಿದ್ದು, ಅವರಿಗೆ 1 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಹಿಂದೂಗಳು ಶಸ್ತ್ರಗಳನ್ನು ಕೈಗಿತ್ತೆಗೊಂಡು ಮುಸ್ಲಿಮರ ವಿರುದ್ಧ ಯುದ್ದ ಮಾಡಬೇಕು ಎಂದು ಅವರು ಕರೆ ನೀಡಿದ್ದರು.
ಇದು ನರಸಿಂಗಾನಂದ ಅವರ ಎರಡನೇ ಧರ್ಮ ಸಂಸದ್ ಆಗಿದ್ದು, ಮೊದಲನೇ ಧರ್ಮ ಸಂಸದ್ 2020 ರ ಜನವರಿ ತಿಂಗಳಲ್ಲಿ ನಡೆದಿತ್ತು. ಈ ವೇಳೆ ದೆಹಲಿ ವಿಧಾನಸಭಾ ಚುನಾವಣೆಗಳು ಇದ್ದವು. ಅಲ್ಲಿಯೂ ದ್ವೇಷಭಾಷಣ ಮಾಡಲಾಗಿತ್ತು ಮತ್ತು ಇದು ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆಗಳಿಗೆ ಕಾರಣವಾಗಿತ್ತು ಎಂದು ದಿ ವೈರ್ ತನಿಖಾ ವರದಿಯೊಂದನ್ನು ಪ್ರಕಟಿಸಿದೆ. ಇದೀಗ ಹರಿದ್ವಾರದಲ್ಲಿ ಎರಡನೇ ಧರಂ ಸಂಸದ್ ನಡೆದಿದ್ದು, ಇನ್ನು ಕೆಲವೇ ತಿಂಗಳಲ್ಲಿ ಉತ್ತರಾಖಂಡದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರ ದ್ವೇಷ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.
“ಹರಿದ್ವಾರ್ ಧರ್ಮ ಸಂಸದ್‌ನಲ್ಲಿ ಏನು ನಡೆದಿದೆಯೋ ಅದು ತಪ್ಪು. ಸಂಬಂಧಪಟ್ಟವರು ಮತ್ತು ಹೊಣೆಗಾರರ ವಿರುದ್ಧ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ” ಎಂದು ಉತ್ತರಾಖಂಡ ಸರ್ಕಾರದ ವಕ್ತಾರ ಸುಬೋಧ್ ಉನಿಯಾಲ್ ಹೇಳಿದ್ದಾರೆ.







