ನವದೆಹಲಿ,ಡಿ.23- ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ,ಮುಂಬೈ, ಬೆಂಗಳೂರು,ನೋಯ್ಡಾ ,ಲಕ್ನೊ ಸೇರಿದಂತೆ ವಿವಿಧ ನಗರಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ನಿರ್ಬಂಧ ಹೇರಲಾಗಿದೆ.
ರೂಪಾಂತರಿ ಸೋಂಕು ಹೆಚ್ಚುತ್ತಿರುವ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಪಾಸಿಟಿವಿಟಿ ಪ್ರಮಾಣ ಹೆಚ್ಚಾದರೆ ರಾತ್ರಿ ಕರ್ಫ್ಯೂ ಜಾರಿ, ಸಭೆ ಸಮಾರಂಭಗಳಿಗೆ ಹೆಚ್ಚು ಜನರು ಸೇರುವುದಕ್ಕೆ ಕಡಿವಾಣ, ಮದುವೆ ಇನ್ನಿತರ ಶುಭಕಾರ್ಯಗಳಿಗೆ ಹೆಚ್ಚು ಜನರು ಪಾಲ್ಗೊಳ್ಳುವುದಕ್ಕೂ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ರೂಪಾಂತರಿ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಿಸ್ಮಸ್ ರಜಾದಿನಗಳಿಗೆ ಕಡಿವಾಣ ಹಾಕಿ ಸೋಂಕು ತಡೆಗಟ್ಟಲು ಎಲ್ಲರೂ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಿಷೇದಾಜ್ಞೆ ಜಾರಿ;
ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ರೂಪಾಂತರಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಮುಂಬೈನಲ್ಲಿ ಡಿಸೆಂಬರ್ 16 ರಿಂದ 31ರ ತನಕ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೆಚ್ಚು ಜನರು ಪಾಲ್ಗೊಳ್ಳದಂತೆ ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮುಂಬೈನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ.
ಜೊತೆಗೆ ಶೇಕಡ 50 ರಷ್ಟು ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಿದ್ದು ಆಯೋಜಕರು ಸಂಪೂರ್ಣವಾಗಿ 2 ಡೋಸ್ ಲಸಿಕೆ ನೀಡಿದವರಿಗೆ ಅಷ್ಟೇ ಅವಕಾಶ ನೀಡಬೇಕು ಎನ್ನುವ ನಿರ್ಬಂಧವನ್ನು ವಿಧಿಸಲಾಗಿದೆ.
ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು.
ಶೇಕಡ 50 ರಷ್ಟು ಮಂದಿಗೆ ಮಾತ್ರ ಅನುವು ಮಾಡಿಕೊಡಬೇಕು. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮಂದಿ ಪೂರ್ಣಪ್ರಮಾಣದಲ್ಲಿ ಲಸಿಕೆ ಪಡೆದಿರಬೇಕು. ಮಹಾರಾಷ್ಟ್ರಕ್ಕೆ ಬರುವ ಮಂದಿ ಕಡ್ಡಾಯವಾಗಿ ಪ್ರಯಾಣದ 72 ಗಂಟೆ ಮುನ್ನ ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಿಸಿ ಕೊಂಡಿರಬೇಕು ಎನ್ನುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.
ದೆಹಲಿಯಲ್ಲಿ ಕಟ್ಟೆಚ್ಚರ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಹೊಸ ವರ್ಷ ಮತ್ತು ಕ್ರಿಸ್ಮಸ್ ಆಚರಣೆ ಸಂಬಂಧ ಜನ ಸೇರುವಿಕೆ ಶೇಕಡಾ 50 ರಂತೆ ಮಿತಿಗೊಳಿಸಲಾಗಿದೆ. ಹೋಟೆಲುಗಳು ರೆಸ್ಟೋರೆಂಟ್‌ಗಳು ಬಾರ್ ಗಳಲ್ಲೂ ಕೂಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ ಮದುವೆ ಸಮಾರಂಭಗಳಲ್ಲಿ 200 ಮಂದಿ ಮೀರದಂತೆ ಕಟ್ಟೆಚ್ಚರವಹಿಸುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಉತ್ತರ ಪ್ರದೇಶದ ನೋಯ್ಡಾ, ಲಕ್ನೋ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದು ಜನರು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ
ಕರ್ನಾಟಕದಲ್ಲಿ ಶೇಕಡ 50 ಸಾಮರ್ಥ್ಯಕ್ಕೆ ಅವಕಾಶ
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೊಸವರ್ಷ ಆಚರಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಶೇಕಡ 50ರಷ್ಟು ಸಾಮರ್ಥ್ಯಕ್ಕೆ ಕ್ಲಬ್ಬು ರೆಸ್ಟೋರೆಂಟ್ಗಳಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2ರ ತನಕ ರಾಜ್ಯದಲ್ಲಿ ನಿಯಮ ಜಾರಿಯಲ್ಲಿದೆ. ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.


