janadhvani

Kannada Online News Paper

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಯಂ ನಿಯಂತ್ರಣ ಅತೀ ಅಗತ್ಯ- ದ.ಕ.ಜಿಲ್ಲಾಧಿಕಾರಿ

ಹಬ್ಬ, ಬ್ರಹ್ಮ ರಥೋತ್ಸವ, ಲಕ್ಷ ದೀಪೋತ್ಸವ, ಧಾರ್ಮಿಕ ಚಟುವಟಿಕೆಗಳು, ಕ್ರಿಸ್‌ಮಸ್ ಆಚರಣೆ, ಉರೂಸ್ ಸಂಭ್ರಮಾಚರಣೆ ಮುಂತಾದವುಗಳಲ್ಲಿ ಸ್ವಯಂ ನಿಯಂತ್ರಣವಿರಲಿ

ಮಂಗಳೂರು, ಡಿ.23: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗಿದ್ದರೂ, ಜನರು ಹಬ್ಬ, ಧಾರ್ಮಿಕ ಚಟುವಟಿಕೆ ಸೇರಿದಂತೆ ಜನ ಸೇರುವ ಕಾರ್ಯಕ್ರಮಗಳಲ್ಲಿ ಸ್ವಯಂ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಸೂಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸದ್ಯಕ್ಕೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 0.26ರಷ್ಟಿದೆ, ಕೋವಿಡ್ ಪ್ರಕರಣ ಇಳಿಕೆಯಾಗಿದೆ, 35 ಮಂದಿ ಮಾತ್ರವೇ ಆಸ್ಪತ್ರೆಯಲ್ಲಿದ್ದಾರೆ, ಒಟ್ಟು ಸಕ್ರಿಯ ಪ್ರಕರಣ 164 ಇದೆ, ಹಾಗಿದ್ದರೂ ಒಮೈಕ್ರಾನ್ ಪ್ರಭೇದದ ವೈರಸ್ ತೀರಾ ವೇಗವಾಗಿ ಪ್ರಸರಿಸುವ ಕಾರಣದಿಂದ ಜನರು ಮೈಮರೆಯದೆ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವುದು, ಕಾರ್ಯಕ್ರಮ ಆಯೋಜಿಸುವಲ್ಲಿ ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಅತೀ ಅಗತ್ಯ ಎಂದರು.

ಹಬ್ಬ, ಬ್ರಹ್ಮ ರಥೋತ್ಸವ, ಲಕ್ಷ ದೀಪೋತ್ಸವ, ಧಾರ್ಮಿಕ ಚಟುವಟಿಕೆಗಳು, ಕ್ರಿಸ್‌ಮಸ್ ಆಚರಣೆ, ಉರೂಸ್ ಸಂಭ್ರಮಾಚರಣೆ ನಡೆಯುತ್ತಿದ್ದು, ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಹೊರಡಿಸಿರುವ ನಿರ್ದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕಂಡುಬಂದಿರುವ ಒಮೈಕ್ರಾನ್ ಪ್ರಕರಣಗಳ ಮೂಲ ಇನ್ನೂ ಪತ್ತೆಯಾಗಿಲ್ಲ, ಆದರೆ ಸೋಂಕಿತರೆಲ್ಲರೂ ಆರೋಗ್ಯವಾಗಿದ್ದಾರೆ, ಎಲ್ಲರಿಗೂ 10 ದಿನಗಳ ಬಳಿಕ ಎರಡು ಬಾರಿ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ಕೂಡಲೇ ಅವರನ್ನು ಐಸೊಲೇಶನ್‌ನಿಂದ ಬಿಡುಗಡೆ ಮಾಡಲಾಗುತ್ತದೆ ಎಂದರು.

ಪ್ರಸಕ್ತ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕೇರಳ ಮೂಲದವರು ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ರಜೆಗಾಗಿ ಊರಿಗೆ ತೆರಳುತ್ತಿದ್ದಾರೆ, ಅಂತಹವರು ಮರಳಿ ಬರುವಾಗ ಅವರು ಆರ್‌ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ತರುವುದು ಕಡ್ಡಾಯ ಮಾಡಲಾಗಿದೆ. ಅವರ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳಿಗೂ ಅವರನ್ನು ಪ್ರತ್ಯೇಕವಾಗಿ ಏಳು ದಿನ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಲಸಿಕೆ ಅಭಿಯಾನಕ್ಕೆ ವಿನೂತನ ರೂಪು ನೀಡುವ ಉದ್ದೇಶದಿಂದ 1,75,000 ಮಕ್ಕಳಿಗೆ ಅವರ ಹೆತ್ತವರು, ಪೋಷಕರು ಲಸಿಕೆ ತೆಗೆದುಕೊಂಡಿದ್ದಾರೆಯೇ ? ಇಲ್ಲವಾದರೆ ಯಾಕಿಲ್ಲ ಎಂಬ ಪತ್ರಗಳನ್ನು ನೀಡಲಾಗಿತ್ತು, ಇದರ ಮೂಲಕ ನಮಗೆ ಕೆಲವರು ಹೆದರಿಕೆ, ಯಾವುದೋ ಕಾಯಿಲೆ ಇದ್ದ ಕಾರಣ ಜನ ಲಸಿಕೆ ತೆಗೆದುಕೊಳ್ಳದಿರುವುದು ಗೊತ್ತಾಗಿದೆ ಎಂದು ಜಿ.ಪಂ ಸಿಇಒ ಡಾ.ಕುಮಾರ್ ತಿಳಿಸಿದರು.

ಈ ವಿವರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗಿದ್ದು ಸಿಬ್ಬಂದಿ ಮೂಲಕ ಜನರ ಮನವೊಲಿಸುವ ಕೆಲಸ ಮನೆಮನೆಗೆ ತೆರಳಿ ಮಾಡಲಾಗುತ್ತಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಪ್ರಭಾರ ಆರೋಗ್ಯಾಧಿಕಾರಿ ಡಾ.ರಾಜೇಶ್, ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ಹಾಜರಿದ್ದರು.