ರಿಯಾದ್ :ಸೌದಿ ಅರೇಬಿಯಾವು ಉದ್ಯೋಗಿಗಳ ಸಂಖ್ಯೆಯನ್ನು ಆಧರಿಸಿ ಕಂಪನಿಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸುವ ಮತ್ತು ದಂಡವನ್ನು ವಿಧಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
ಇದು ಕಾರ್ಮಿಕ ಉಲ್ಲಂಘನೆಗಾಗಿ ಸಣ್ಣ ಉದ್ಯಮಗಳಿಗೆ ಭಾರಿ ದಂಡ ವಿಧಿಸುವ ವಿಧಾನವನ್ನು ಬದಲಾಯಿಸಲಿದೆ. ಪ್ರತಿ ಉಲ್ಲಂಘನೆಗೆ ನವೀಕರಿಸಿದ ದಂಡದ ಪಟ್ಟಿಯನ್ನು ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡಿದೆ.ಕಾರ್ಮಿಕ ಕಾನೂನುಗಳ ಉಲ್ಲಂಘನೆಗಾಗಿ ಪರಿಷ್ಕೃತ ದಂಡವು ನಿನ್ನೆಯಿಂದ ಜಾರಿಗೆ ಬಂದಿದೆ.
ಸಣ್ಣ ಸಂಸ್ಥೆಗಳು ಒಂದರಿಂದ ಹತ್ತು ಉದ್ಯೋಗಿಗಳನ್ನು ಹೊಂದಿರುತ್ತವೆ. ಮಧ್ಯಮ ಉದ್ಯಮಗಳು 11 ರಿಂದ 50 ಉದ್ಯೋಗಿಗಳನ್ನು ಹೊಂದಿವೆ. ಉನ್ನತ ಸಂಸ್ಥೆಗಳು 51 ರಿಂದ ಮೇಲ್ಪಟ್ಟ ಉದ್ಯೋಗಿಗಳನ್ನು ಹೊಂದಿರಲಿದೆ.
ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ ಇನ್ಮುಂದೆ ಕಡಿಮೆ ದಂಡವನ್ನು ವಿಧಿಸಲಾಗುತ್ತದೆ. ಸಣ್ಣ ಉದ್ದಿಮೆಗಳ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ, ಎಲ್ಲಾ ಸಂಸ್ಥೆಗಳಿಗೆ ಕೆಲಸದ ಸ್ಥಳ ಸುರಕ್ಷತೆ ಮತ್ತು ಆರೋಗ್ಯ ಕ್ರಮಗಳ ಉಲ್ಲಂಘನೆಗಾಗಿ ಹತ್ತು ಸಾವಿರ ರಿಯಾಲ್ ದಂಡ ವಿಧಿಸಲಾಗುತ್ತಿತ್ತು.ಇನ್ನು ಮುಂದೆ ಸಣ್ಣ ಉದ್ದಿಮೆಗಳಿಗೆ 2,500 ರಿಯಾಲ್, ಮಧ್ಯಮ ವರ್ಗದವರಿಗೆ 5,000 ಮತ್ತು 50ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಿಗೆ 10,000 ರಿಯಾಲ್ ದಂಡ ವಿಧಿಸಲಾಗುವುದು.
ನೌಕರರು ಮತ್ತು ಕುಟುಂಬದ ಸದಸ್ಯರಿಗೆ ವಿಮೆಯನ್ನು ನೀಡದಿದ್ದಲ್ಲಿ ಸಣ್ಣ ಸಂಸ್ಥೆಗಳಿಗೆ 3,000 ರಿಯಾಲ್, ಮಧ್ಯಮ ಸಂಸ್ಥೆಗಳಿಗೆ 5,000 ಮತ್ತು ದೊಡ್ಡ ಸಂಸ್ಥೆಗಳಿಗೆ 10,000 ರಿಯಾಲ್ ದಂಡ. 15 ವರ್ಷದೊಳಗಿನ ಮಕ್ಕಳನ್ನು ನೇಮಿಸಿಕೊಂಡರೆ ಮೊದಲ ವರ್ಗಕ್ಕೆ 20,000 ರಿಯಾಲ್ ಮತ್ತು ಎರಡನೇ ಮತ್ತು ಮೂರನೇ ವರ್ಗಕ್ಕೆ 10,000 ರಿಯಾಲ್ ದಂಡ ವಿಧಿಸಲಾಗುತ್ತದೆ.
ಹೆರಿಗೆಯ ನಂತರದ ಮೊದಲ ಆರು ವಾರಗಳಲ್ಲಿ ಮಹಿಳೆಯರನ್ನು ನೇಮಿಸಿಕೊಂಡರೆ, ದಂಡವು ಎಲ್ಲಾ ವರ್ಗಗಳಿಗೆ 10,000 ರಿಯಾಲ್ ಆಗಿದೆ. ಉದ್ಯೋಗಿಗಳ ಸಂಬಳ ತಡವಾದರೆ ಎಲ್ಲಾ ವರ್ಗದ ಉದ್ದಿಮೆಗಳಿಗೂ 3,000 ರಿಯಾಲ್ ದಂಡ ವಿಧಿಸಲಾಗುತ್ತದೆ.


