janadhvani

Kannada Online News Paper

ಕೋಟೆಕಾರ್ : SDPI ಪಕ್ಷದಿಂದ ಅಭ್ಯರ್ಥಿ ಘೋಷಣಾ ಸಭೆ

ಕೋಟೆಕಾರ್ ( ಡಿ 11 ) : ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆಗೆ ವಿವಿಧ ವಾರ್ಡ್ ಗಳಿಂದ ಸ್ಪರ್ಧಿಸಲಿರುವ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಅಭ್ಯರ್ಥಿಗಳ ಘೋಷಣಾ ಸಭೆ ಇಂದು ಕೋಟೆಕಾರ್ ಅಜ್ಜಿನಡ್ಕದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಕಳೆದ ಚುನಾವಣೆಯಲ್ಲಿ ಇಲ್ಲಿನ 16 ನೇ ವಾರ್ಡ್ ನಿಂದ ವಿಜಯಿಯಾಗಿದ್ದ SDPI ಅಭ್ಯರ್ಥಿ ಝುಲೇಖಾ ಬಶೀರ್ ಸುಮಾರು 50 ಲಕ್ಷ ಅನುದಾನವನ್ನು ವಾರ್ಡಿಗೆ ತಂದು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಅದೂ ಅಲ್ಲದೇ ಕೋಟೆಕಾರ್ ಪಟ್ಟಣ ಸಮಿತಿ ಕೋವಿಡ್ ಸಂಕಷ್ಟ ಕಾಲದಲ್ಲಿ ಇಲ್ಲಿನ ಜನರ ನೆರವಿಗೆ ನಿಂತಿದ್ದು ಜೊತೆಗೆ ದಾನಿಗಳ ನೆರವು ಪಡೆದು ಸುಮಾರು 39 ಲಕ್ಷವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದೆ. ಇವೆಲ್ಲಾ ಈ ಚುನಾವಣೆಯಲ್ಲಿ SDPI ಅಭ್ಯರ್ಥಿಗಳಿಗೆ ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲಿ ಜಯ ತಂದುಕೊಡಲಿದೆ ಎಂದರು.

16 ನೇ ವಾರ್ಡಿನಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಕೈಪಿಡಿಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಬಿಡುಗಡೆ ಮಾಡಿದರು. ಚುನಾವಣಾ ಉಸ್ತುವಾರಿ ಇಕ್ಬಾಲ್ ಐಎಂಆರ್ ಅಭ್ಯರ್ಥಿಗಳ ಘೋಷಣೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಝಾಕಿರ್ ಉಳ್ಳಾಲ್, ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಅಶ್ರಫ್ ಮಂಚಿ ಉಪಸ್ಥಿತರಿದ್ದರು. ಕೋಟೆಕಾರ್ ಪಟ್ಟಣ ಸಮಿತಿ ಅಧ್ಯಕ್ಷರಾದ ಮೊಯ್ದಿನ್ ಎಸ್.ಬಿ ಅಧ್ಯಕ್ಷತೆ ವಹಿಸಿದ್ದರೆ ಇಸ್ಮಾಯಿಲ್ ಟಿ ಕಾರ್ಯಕ್ರಮ ನಿರೂಪಿಸಿ, ಆಸಿಫ್ ಮುಳ್ಳುಗುಡ್ಡೆ ವಂದಿಸಿದರು.