janadhvani

Kannada Online News Paper

ಪಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ವಂಚನೆ- ಸಾರ್ವಜನಿಕರಿಗೆ ಎಚ್ಚರಿಕೆ

ಬೆಂಗಳೂರು, ಡಿಸೆಂಬರ್ 6: ಪಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ಸಾರ್ವಜನಿಕರ ಹೆಸರಿನಲ್ಲಿ ವಾಹನಗಳನ್ನು ಖರೀದಿ ಮಾಡಿ ವಂಚಿಸುವ ಜಾಲ ಪತ್ತೆಯಾಗಿದ್ದು, ನಗರದಲ್ಲಿ ಶುರುವಾಗಿರುವ ವಿಚಿತ್ರ ರೀತಿಯ ದೋಖಾಕ್ಕೆ ಸಾರ್ವಜನಿಕರು ಕಂಗಲಾಗಿದ್ದಾರೆ. ನಯೀಮ್ ತಾಜ್ ಈ ದೋಖಾಕ್ಕೆ ಒಳಗಾದ ವ್ಯಕ್ತಿ.

ಏನಿದು ಘಟನೆ?

ಖದೀಮರು ಚೈನ್ ಲಿಂಕ್ ಸ್ಕೀಮ್ ಇದೆ ಎಂದು ನಂಬಿಸಿ ನಯೀಮ್ ತಾಜ್ ಅವರಿಂದ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ಪುಲಕೇಶಿನಗರದ ಸಂಗೀತಾ ಶೋ ರೂಂ ನಲ್ಲಿ ಸದಸ್ಯರಾಗಿದ್ದೀರಿ ಎಂದು ಹೇಳಿ ಸಾವಿರ ರೂಪಾಯಿ ನೀಡಿದ್ದರು. ನಂತರ ಖದೀಮರು ಇನ್ನಷ್ಟು ಜನರನ್ನ ಸೇರಿಸಿದ್ರೆ ನಿಮಗೆ ಇದೆ ರೀತಿ ಹಣ ಬರುತ್ತೆ ಎಂದಿದ್ದರು. ಹಣದ ಆಸೆಗೆ ಒಳಗಾದ ನಜೀಮ್ ಇಪ್ಪತ್ತೈದು ಜನರನ್ನು ಈ ಹೊಸ ಸ್ಕಿಮ್‍ಗೆ ಸೇರಿಸಿದ್ದರು. ಇವರೆಲ್ಲರೂ ತಮ್ಮ ಅಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್‍ಗಳನ್ನ ನಜೀಮ್ ಅವರಿಗೆ ನೀಡಿದ್ದರು. 

ಇವೆಲ್ಲಾ ಆದ ಮೇಲೆ ಬ್ಯಾಂಕಿನವರು ನೀವು ವಾಹನ ಖರೀದಿ ಮಾಡಿದ್ದಿರಿ, ತಿಂಗಳ ಇಎಂಐ ಪಾವತಿಸಬೇಕು ಎಂದು ಕರೆ ಮಾಡಿದ್ದರು. ಯಾವುದೇ ವಾಹನ ಖರೀದಿ ಮಾಡದವರಿಗೆ ಇದೆಂತಹ ಇಎಂಐ ಎಂದು ವಿಚಾರಿಸಿದಾಗ ಈ ಖದೀಮರು ಸಾರ್ವಜನಿಕರಿಂದ ಪಡೆದ ದಾಖಲೆಗಳನ್ನು ಉಪಯೋಗಿಸಿ ಇಎಂಐನಲ್ಲಿ ವಾಹನಗಳ ಖರೀದಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ಸಾರ್ವಜನಿಕರು ಪುಲಿಕೇಶಿನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ಪೊಲೀಸರು ಸಾರ್ವಜನಿಕರ ದೂರಿನನ್ವಯ ಮಹಮ್ಮದ್ ಜೈನ್, ಲೋಕೇಶ್, ಕಾರ್ತಿಕ್ , ಮುಜಾಹಿದ್ ಹಫೀಜ್ , ಮನ್ಸೂರ್, ಎಂಬುವರ ಮೇಲೆ ಎಫ್ ಐ ಆರ್ ದಾಖಲು ಮಾಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.