ಮಂಗಳೂರು: ನಗರದ ಶಾಲಾ ಕಾಲೇಜು ಗಳು ಕೊರೋನಾ ಬಳಿಕ ಮತ್ತೆ ಆರಂಭವಾದ ಹಿನ್ನೆಲೆ ಜಿಲ್ಲೆಯಲ್ಲಿ ಮತ್ತೆ ಡ್ರಗ್ಸ್ ಜಾಲ ಆ್ಯಕ್ಟಿವ್ ಆಗಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದ್ದು, ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ 5 ಮಂದಿ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್ ಆಗಿರೋ ವಿದ್ಯಾರ್ಥಿಗಳು ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ತಡ ರಾತ್ರಿ ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಡ್ರಗ್ಸ್ ಮಾಫಿಯಾ ಜಾಲ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದೆ ಎನ್ನಲಾಗಿದ್ದು, ಸದ್ಯ ವಿದ್ಯಾರ್ಥಿಗಳು ಬಂಧನ ಆದ ಬಳಿಕ ಮಂಗಳೂರು ಪೊಲೀಸರು ಡ್ರಗ್ಸ್ ಸರಬರಾಜು ಜಾಲವನ್ನು ಮಟ್ಟಹಾಕಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನಲಾಗಿದೆ.