janadhvani

Kannada Online News Paper

ಪಾಕಿಸ್ತಾನದ ಧ್ವಜವಲ್ಲ ಎಂದ ಪೋಲೀಸ್- ದೇಶದ್ರೋಹ ಪ್ರಕರಣ ರದ್ದು

“ಮುಸ್ಲಿಮರ ಮನೆಯ ಮೇಲೆ ಹಾರಿಸಿರುವುದು ಪಾಕಿಸ್ತಾನದ ಧ್ವಜವಲ್ಲ, ಧಾರ್ಮಿಕ ಧ್ವಜಗಳು”

ಉತ್ತರ ಪ್ರದೇಶ: ಇಲ್ಲಿನ ಗೋರಖ್‌ಪುರ ಪೊಲೀಸರು, ಮನೆಯ ಮೇಲೆ ಪಾಕಿಸ್ತಾನದ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಆರೋಪಿಸಿ ನಾಲ್ವರು ಮುಸ್ಲಿಮರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು.

ಇದೀಗ ಪೊಲೀಸರು ನಡೆಸಿದ ಪ್ರಕರಣದ ಪ್ರಾಥಮಿಕ ತನಿಖೆಯು, “ಮುಸ್ಲಿಮರ ಮನೆಯ ಮೇಲೆ ಹಾರಿಸಿರುವುದು ಪಾಕಿಸ್ತಾನದ ಧ್ವಜವಲ್ಲ, ಧಾರ್ಮಿಕ ಧ್ವಜಗಳು” ಎಂದು ಕಂಡುಹಿಡಿದು ಅಂತಿಮ ವರದಿಯನ್ನು ಸಲ್ಲಿಸಿದ್ದಾಗಿ ವರದಿಯಾಗಿದೆ.

ಧ್ವಜಗಳ ಮೇಲೆ ಯಾವುದೇ ಆಕ್ಷೇಪಾರ್ಹ ಪದಗಳನ್ನು ಬರೆದಿರಲಿಲ್ಲ ಎಂದು ಪ್ರತಿಪಾದಿಸಿ ಪೊಲೀಸರು ಯಾರನ್ನೂ ಬಂಧಿಸಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಮನೆಯ ಮೇಲೆ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂದು ಪ್ರತಿಪಾದಿಸಿ ಚಿತ್ರವೂಂದು ವೈರಲ್‌ ಆಗಿತ್ತು. ಕೆಲವು ಜನರ ಗುಂಪು ಮನೆಯ ಹೊರಗೆ ಪ್ರತಿಭಟನೆ ನಡೆಸಿತ್ತು. ಇದರನ್ವಯ ನಾಲ್ವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.

ನಾಲ್ವರು ಉದ್ಯಮಿಗಳಾದ ತಾಲೀಮ್, ಪಪ್ಪು, ಆಶಿಕ್ ಮತ್ತು ಅವರ ಸಹೋದರ ಆಸಿಫ್ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ನಾಲ್ವರು ಎರಡು ಕುಟುಂಬಗಳಿಗೆ ಸೇರಿದವರಾಗಿದ್ದು ಗೋರಖ್‌ಪುರದ ಚೌರಿ ಚೌರಾ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಭಟನಾಕಾರರು ಎರಡು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ಕಾರುಗಳನ್ನು ಹಾನಿಗೊಳಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕುಟುಂಬವು ಆರೋಪಗಳನ್ನು ನಿರಾಕರಿಸಿ, ನಾಲ್ಕು ಧ್ವಜಗಳನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.

ಪ್ರಸ್ತುತ ಧ್ವಜಗಳನ್ನು ತಮ್ಮ ಕುಟುಂಬದ ಮಹಿಳಾ ಸದಸ್ಯರು ಹೊಲಿದಿದ್ದಾರೆ ಎಂದು ಅವರು ಹೇಳಿದ್ದಾರೆ. ಒಂದು ಧ್ವಜದ ಮೇಲೆ ಉರ್ದು ಪಠ್ಯವಿತ್ತು. ‘ಬರವಾಫತ್’ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ಧ್ವಜಗಳನ್ನು ಹಾರಿಸಿದ್ದೇವೆ ಎಂದು ಕುಟುಂಬಗಳು ಪೊಲೀಸರಿಗೆ ತಿಳಿಸಿದ್ದಾರೆ.

ಹಬ್ಬ ಮುಗಿದ ನಂತರ ಅವರು ಧ್ವಜಗಳನ್ನು ತೆಗೆದುಹಾಕಿರಲಿಲ್ಲ ಎಂದು ಅವರು ಹೇಳಿದ್ದಾರೆ. ಬ್ರಾಹ್ಮಣ ಜನ ಕಲ್ಯಾಣ ಸಮಿತಿಯ ಅಧ್ಯಕ್ಷ ಕಲ್ಯಾಣ್ ಪಾಂಡೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

error: Content is protected !! Not allowed copy content from janadhvani.com