ಬೆಂಗಳೂರು: ದೇಶದಲ್ಲಿ ಮುಸ್ಲಿಂ ಸಮುದಾಯದ 22 ಕೋಟಿ ಜನರಿದ್ದಾರೆ. ಹೀಗಿರುವಾಗ ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು ಹೇಗಾಗುತ್ತಾರೆ? ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳಿಕೆಗಾಗಿ ಮುಸ್ಲಿಮರ ಓಲೈಕೆ ನಡೆಯುತ್ತಿಲ್ಲ. ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.
ಮುಸ್ಲಿಮರ ಕೈ ಹಿಡಿಯಲು ಯಾವುದೇ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು.
ನಮ್ಮದು ಜಾತ್ಯತೀತ ದೇಶ. ಮುಸ್ಲಿಮರು ಜಾತ್ಯತೀತ ಪಕ್ಷಗಳ ಜತೆಯೇ ಇರುತ್ತಾರೆ. ಕಾಂಗ್ರೆಸ್ 70 ವರ್ಷಗಳಿಂದ ಜಾತ್ಯತೀತತೆಯ ರಕ್ಷಣೆಗಾಗಿ ನಿಂತಿದ್ದರಿಂದ ಮುಸ್ಲಿಮರು ಅದನ್ನು ಬೆಂಬಲಿಸುತ್ತಿದ್ದಾರೆ. ನಾಳೆ ಕಾಂಗ್ರೆಸ್ ಜಾತ್ಯತೀತ ತತ್ವಗಳ ವಿರುದ್ಧ ನಡೆದರೆ ಬೆಂಬಲ ನೀಡುವುದಿಲ್ಲ. ಮುಸ್ಲಿಮರು ಕಾಂಗ್ರೆಸ್ಗೆ ಮಾತ್ರ ಬೆಂಬಲ ನೀಡುವುದಲ್ಲ, ಬಿಜೆಪಿ ಕೂಡ ಜಾತ್ಯತೀತ ಪಕ್ಷವಾದರೆ ಆ ಪಕ್ಷದ ಜತೆಯೂ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಸಿ.ಎಂ. ಇಬ್ರಾಹಿಂ ಪಕ್ಷ ತೊರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಅವರು ಹಿರಿಯ ನಾಯಕ. ಅವರನ್ನು ಪರಿಷತ್ನಲ್ಲಿ ಪ್ರತಿಪಕ್ಷ ನಾಯಕರನ್ನಾಗಿ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಸಮುದಾಯದ ಬಣ್ಣ ಕೊಡುವುದು ಬೇಡ. ನನಗೆ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ. ಅವರಿಗೂ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಸಚಿವ ಸ್ಥಾನ ನೀಡಲಾಗಿತ್ತು. ಗುಂಡೂರಾವ್ ಸರಕಾರದಲ್ಲಿ ಸಚಿವರಾಗಿದ್ದರು,” ಎಂದು ಹೇಳಿದರು.
ಜಾಫರ್ ಷರೀಫ್ ಅವರ ಮೊಮ್ಮಗ ಸೋಲಲು ಸಿದ್ದರಾಮಯ್ಯ ಕಾರಣ ಎಂಬ ಕುಮಾರಸ್ವಾಮಿ ಆರೋಪಕ್ಕೆ, ”ಕುಮಾರಸ್ವಾಮಿಯವರ ಹೇಳಿಕೆ ಎಲ್ಲವೂ ಸತ್ಯವಲ್ಲ. ಹಾಗಾದರೆ ಜಾಫರ್ ಷರೀಫ್ ಮೊಮ್ಮಗನಿಗೆ ಅವರೇ ಜೆಡಿಎಸ್ನಿಂದ ನಿಲ್ಲಿಸಿ ಗೆಲ್ಲಿಸಬೇಕಿತ್ತು. ಯಾಕೆ ಹಾಗೆ ಮಾಡಲಿಲ್ಲ? ಹೀಗೆ ಮಾತನಾಡುತ್ತಾ ಹೋದರೆ ನಾವು ಸಾಕಷ್ಟು ಮಾತನಾಡಬಹುದು” ಎಂದರು.


