ತಿರುವನಂತಪುರಂ |ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಇತರ ಹಾನಿಯಲ್ಲಿ ಮರಣ ಹೊಂದಿದವರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ.
ನಿನ್ನೆ ಕೊಟ್ಟಾಯಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಕೊಕ್ಕಾಯಾರ್ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ.
ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೀರ ಪ್ರದೇಶದ ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ.ಬುಧವಾರದಿಂದ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ತಿರುವನಂತಪುರಂನಿಂದ ಕೋಯಿಕ್ಕೋಡ್ ವರೆಗೆ ಹನ್ನೊಂದು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯ ಸಾಧ್ಯತೆಯಿಲ್ಲದಿದ್ದರೂ, ಪತ್ತನಂತಿಟ್ಟ, ಕೊಟ್ಟಾಯಂ, ಪಾಲಕ್ಕಾಡ್ ಮತ್ತು ಮಲಪ್ಪುರಂನಲ್ಲಿ ಮೋಡಕವಿದ ವಾತಾವರಣವಿದ್ದು,ಆತಂಕಕ್ಕೆ ಕಾರಣವಾಗಿದೆ.ಈ ಪ್ರದೇಶಗಳಲ್ಲಿ ನಿರಂತರ ಮಳೆ ಬಂದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಿಸಬಹುದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಎಂಎ) ಎಚ್ಚರಿಸಿದೆ.