janadhvani

Kannada Online News Paper

ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.

ಬಂಟ್ವಾಳ: ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಅಂತಹುದೇ ಪ್ರಕರಣವೊಂದು ಕರ್ನಾಟಕದ ಬಂಟ್ವಾಳದಲ್ಲಿ ವರದಿಯಾಗಿದೆ. ದಿನೇನೇ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವ ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಐದು ಮಂದಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.ಬಂಟ್ವಾಳದ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಶಾಲೆಗೆ ತೆರಳುತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಲಾಗಿದೆ. ಬಳಿಕ ಅಮ್ಟಾಡಿಯದ ನಿರ್ಜನ ಪ್ರದೇಶದಲ್ಲಿ ರೂಂ ಒಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದೆ.

ಮಾಹಿತಿ ನೀಡಿದ ಪೊಲೀಸರು
ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಾನೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಂತ್ರಸ್ತೆ ನೀಡಿರುವ ದೂರಿನಂತೆ ಶುಕ್ರವಾರ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಕೆಗೆ ಪರಿಚಿತ ವ್ಯಕ್ತಿಯೊಬ್ಬರು ಇತರ ನಾಲ್ವರೊಂದಿಗೆ ಕಾರಿನಲ್ಲಿ ಬಂದು ಅಪಹರಿಸಿದ್ದಾರೆ. ನಂತರ ಆಕೆಯನ್ನು ಏಕಾಂತ ಸ್ಥಳದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ. ನಂತರ ಆರೋಪಿಗಳು ಆಕೆಯನ್ನು ಬ್ರಹ್ಮರಕುಟ್ಲುವಿನಲ್ಲಿ ಬಿಟ್ಟು ಹೋದದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಹೇಳಿದರು.

ಅಂತೆಯೇ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 366 (ಎ) (ಅಪಹರಣ), 376 (ಡಿ) (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿಸಿದರು.

ಸಂತ್ರಸ್ತ ಬಾಲಕಿಯನ್ನು ಪ್ರಸ್ತುತ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಾಲಕಿಯ ಹೇಳಿಕೆಯ ಆಧಾರದಲ್ಲಿ ಪೊಲೀಸರಿಗೆ ಆರೋಪಿಗಳ ಸುಳಿವು ಲಭ್ಯವಾಗಿದ್ದು, ಶೀಘ್ರ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.error: Content is protected !! Not allowed copy content from janadhvani.com