janadhvani

Kannada Online News Paper

ಟಾಟಾ ಸನ್ಸ್‌ ಈಗಾಗಲೇ ಎರಡು ವಿಮಾನಯಾನ ಕಂಪನಿಗಳನ್ನು ಹೊಂದಿದೆ. ಏರ್‌ ಏಷ್ಯಾ ಹಾಗೂ ವಿಸ್ತಾರದಲ್ಲಿ ಟಾಟಾದ ಪಾಲಿದೆ.

ನವದೆಹಲಿ: ಸಾಲದ ಸುಳಿಗೆ ಸಿಲುಕಿದ್ದ ಏರ್‌ ಇಂಡಿಯಾ Air India ಟಾಟಾ ಸನ್ಸ್‌ ಪಾಲಾಗಿದೆ. ಹಣಕಾಸು ಬಿಡ್‌ನಲ್ಲಿ ಅತೀ ಹೆಚ್ಚಿನ 18,000 ಕೋಟಿ ರೂ. ಮೊತ್ತಕ್ಕೆ ಬಿಡ್‌ ಮಾಡಿದ್ದ ಟಾಟಾ ಗ್ರೂಪ್‌ ಏರ್‌ ಇಂಡಿಯಾವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ‘ಮಹಾರಾಜ’ ಮತ್ತೆ ಮರಳಿ ಗೂಡು ಸೇರಿದ್ದಾನೆ.

1953ರವರೆಗೂ ಏರ್‌ ಇಂಡಿಯಾ ಟಾಟಾ ಗ್ರೂಪ್‌ ಒಡೆತನದಲ್ಲೇ ಇತ್ತು. ಆದರೆ ಅಂದಿನ ಜವಾಹರ್‌ಲಾಲ್‌ ನೆಹರೂ ಸರಕಾರ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುವುದರೊಂದಿಗೆ ಏರ್‌ ಇಂಡಿಯಾ ಒಡೆತನ ಸರಕಾರಕ್ಕೆ ವರ್ಗಾವಣೆಯಾಗಿತ್ತು. ಇದೀಗ ಬರೋಬ್ಬರಿ 68 ವರ್ಷಗಳ ನಂತರ ಏರ್‌ ಇಂಡಿಯಾವನ್ನು ಮತ್ತೆ ಟಾಟಾ ಗ್ರೂಪ್‌ ತನ್ನ ಮಡಿಲಿಗೆ ಹಾಕಿಕೊಂಡಿದೆ.

ಈ ಖರೀದಿಯೊಂದಿಗೆ ಏರ್‌ ಇಂಡಿಯಾ ಮತ್ತು ಅದರ ಕಡಿಮೆ ಬೆಲೆಯ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಪೂರ್ಣ ಮಾಲಿಕತ್ವ (100% ಷೇರುಗಳು) ಟಾಟಾದ್ದಾಗಲಿದೆ. ಜತೆಗೆ ವಿಮಾನ ನಿಲುಗಡೆಯನ್ನು ನಿರ್ವಹಣೆ ಮಾಡುವ ಏರ್‌ ಇಂಡಿಯಾ ಎಸ್‌ಎಟಿಎಸ್‌ ಏರ್‌ಪೋರ್ಟ್‌ ಸರ್ವೀಸಸ್‌ ಪ್ರೈ. ಲಿ. (ಎಐಎಸ್‌ಎಟಿಎಸ್‌)ನ ಶೇ. 50ರಷ್ಟು ಷೇರುಗಳೂ ಕಂಪನಿ ಪಾಲಾಗಲಿವೆ.

ಏರ್‌ ಇಂಡಿಯಾ ತಾಂತ್ರಿಕ ಬಿಡ್‌ನಲ್ಲಿ ಒಟ್ಟು ನಾಲ್ಕು ಸಂಸ್ಥೆಗಳು ಬಿಡ್‌ ಮಾಡಿದ್ದವು. ಆದರೆ ಹಣಕಾಸು ಬಿಡ್‌ನಲ್ಲಿ ಟಾಟಾ ಗ್ರೂಪ್‌ ಮತ್ತು ಸ್ಪೈಸ್‌ಜೆಟ್‌ ಅಧ್ಯಕ್ಷ ಅಜಯ್‌ ಸಿಂಗ್‌ ಮಾತ್ರ ಉಳಿದುಕೊಂಡಿದ್ದರು. ಅಜಯ್‌ ಸಿಂಗ್‌ ಸಂಸ್ಥೆಯ ಬದಲು ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಬಿಡ್‌ ಮಾಡಿದ್ದರು. ಇದೀಗ ಟಾಟಾ ಸನ್ಸ್‌ ಹೆಚ್ಚಿನ ಮೊತ್ತವನ್ನು ಬಿಡ್‌ ಮಾಡಿ ಈ ಬಿಡ್‌ ಗೆದ್ದುಕೊಂಡಿದೆ.ಕಳೆದ ತಿಂಗಳೇ ಟಾಟಾ ಗ್ರೂಪ್‌ ಬಿಡ್‌ ಗೆದ್ದುಕೊಂಡಿದೆ ಎದ್ದು ಸುದ್ದಿಯಾಗಿತ್ತು. ಆದರೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ವರದಿಯನ್ನು ತಳ್ಳಿ ಹಾಕಿದ್ದರು. ಯಾವುದೂ ಇನ್ನೂ ಅಂತಿಮವಾಗಿಲ್ಲ ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದರು.

ಏರ್ ಇಂಡಿಯಾ ಖರೀದಿಯೊಂದಿಗೆ ಏನಾಗಲಿದೆ?

ಬಿಡ್‌ ಗೆಲ್ಲುವ ಮೂಲಕ ಭಾರತದ ಏರ್‌ಪೋರ್ಟ್‌ಗಳಲ್ಲಿ 4,400 ಸ್ಲಾಟ್‌ಗಳು ಹಾಗೂ ವಿದೇಶ ಹಾರಾಟದ 2,700 ಸ್ಲಾಟ್‌ಗಳನ್ನು ಟಾಟಾ ಗ್ರೂಪ್‌ ಪಡೆದುಕೊಂಡಿದೆ. ಸ್ಲಾಟ್‌ಗಳೆಂದರೆ ನಿಗದಿತ ಆಗಮನ ಹಾಗೂ ನಿರ್ಗಮನ ಸಮಯಗಳು. 1,500 ಪರಿಣತ ಪೈಲಟ್‌ಗಳು, 2,000 ಎಂಜಿನಿಯರ್‌ಗಳು ಸಂಸ್ಥೆಯಲ್ಲಿದ್ದಾರೆ.

ಹಾಗೇ ನೋಡಿದರೆ ಟಾಟಾ ಸನ್ಸ್‌ ಈಗಾಗಲೇ ಎರಡು ವಿಮಾನಯಾನ ಕಂಪನಿಗಳನ್ನು ಹೊಂದಿದೆ. ಏರ್‌ ಏಷ್ಯಾ ಹಾಗೂ ವಿಸ್ತಾರದಲ್ಲಿ ಟಾಟಾದ ಪಾಲಿದೆ. ಸಿಂಗಾಪೂರ್‌ ಏರ್‌ಲೈನ್ಸ್‌ ಜತೆ ಸೇರಿ ವಿಸ್ತಾರಾವನ್ನು ಟಾಟಾ ಮುನ್ನಡೆಸುತ್ತಿದ್ದರೆ, ಮಲೇಷ್ಯಾದ ಏರ್‌ಏಷ್ಯಾ ಜತೆ ಸೇರಿ ಏರ್‌ಏಷ್ಯಾ ಇಂಡಿಯಾ ಎಂಬ ಇನ್ನೊಂದು ವಿಮಾನಯಾನ ಸಂಸ್ಥೆಯೂ ಟಾಟಾ ನಡೆಸುತ್ತಿದೆ.

ಇವುಗಳ ಜೊತೆಗೆ ಇದೀಗ ಏರ್‌ ಇಂಡಿಯಾವನ್ನೂ ಗೆದ್ದುಕೊಂಡಿದ್ದು, ಟಾಟಾದ ಲೋಹದ ಹಕ್ಕಿಗಳ ಸಂಸ್ಥೆಗಳ ಸಂಖ್ಯೆ ಮೂರಕ್ಕೇರಿದೆ. ಟಾಟಾ ತನ್ನ ಸಂಸ್ಥೆಗಳಲ್ಲಿ ಏರ್‌ ಇಂಡಿಯಾವನ್ನು ವಿಲೀನಗೊಳಿಸಲೂಬಹುದು.

ಈ ಬಿಡ್‌ ಗೆಲ್ಲುವ ಮೂಲಕ, ಏರ್‌ ಇಂಡಿಯಾದ ದೊಡ್ಡ ಮೊತ್ತದ ಸಾಲದ ಸಮಸ್ಯೆಯನ್ನು ಪರಿಹರಿಸುವ ಸವಾಲು ಟಾಟಾಗಳಿಗೆ ಎದುರಾಗಲಿದೆ. ಸುಮಾರು 23,286 ಕೋಟಿ ರೂ. ಸಾಲವನ್ನು ತೀರಿಸುವ ಹೊಣೆಯನ್ನು ಟಾಟಾ ಹೊತ್ತುಕೊಳ್ಳಬೇಕಾಗುತ್ತದೆ. ಟಾಟಾ ಸನ್ಸ್‌ ಮುಖ್ಯಸ್ಥರಾಗಿರುವ ರತನ್‌ ಟಾಟಾ ಅವರೇ ಸಮಗ್ರ ಹೊಣೆಯನ್ನು ನಿರ್ವಹಿಸಲಿದ್ದಾರೆ. ತಮ್ಮ ತಾತ ಜೆಆರ್‌ಡಿ ಟಾಟಾ ಅವರಂತೆಯೇ ರತನ್‌ ಅವರಿಗೂ ವಾಯುಯಾನ ವಲಯ ಅತ್ಯಂತ ಇಷ್ಟ. ಆದರೆ ಭಾರತದಲ್ಲಿ ಪ್ರಭಾವಿಯಾಗಿರುವ ಇಂಡಿಗೋ ಹಾಗೂ ಸ್ಪೈಸ್‌ಜೆಟ್‌ಗಳ ಪೈಪೋಟಿಯನ್ನು ಇದೀಗ ಸಂಸ್ಥೆ ಎದುರಿಸಬೇಕಾಗಿದೆ.

1932 ರಿಂದ 2021ರವರೆಗೆ ಏರ್‌ ಇಂಡಿಯಾ ಹಾರಿ ಬಂದ ಹಾದಿ

1932ರಲ್ಲಿ ಜೆಆರ್‌ಡಿ ಟಾಟಾ ಅವರಿಂದ ಟಾಟಾ ಏರ್‌ಲೈನ್ಸ್‌ ಸಂಸ್ಥೆ ಆರಂಭವಾಯಿತು. ಇದೇ ಇಂದಿನ ಏರ್‌ ಇಂಡಿಯಾದ ಮೊದಲ ಅಡಿಪಾಯವಾಗಿತ್ತು. ಸ್ವತಃ ಪೈಲಟ್‌ ಆಗಿದ್ದ ಜೆಆರ್‌ಡಿ ಟಾಟಾ ಮೊದಲ ಸೇವೆಯನ್ನು ತಾವೇ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಕರಾಚಿಯಿಂದ ಬಾಂಬೆಗೆ (ಮುಂಬಯಿ) ಮೊದಲ ವಿಮಾನ ಸರಕು ಸಾಗಣೆ ಹೊತ್ತು ಬರುವುದರೊಂದಿಗೆ ಟಾಟಾ ಏರ್‌ಲೈನ್‌ ರೆಕ್ಕೆ ಬಡಿದು ಹಾರಾಟ ಶುರುವಿಟ್ಟುಕೊಂಡಿತು.

1946ರಲ್ಲಿ ಟಾಟಾ ಏರ್‌ಲೈನ್ಸ್‌ ಸಾರ್ವಜನಿಕ ಕಂಪನಿಯಾಯಿತು ಮತ್ತು ಏರ್‌ ಇಂಡಿಯಾ ಲಿ. ಎಂದು ಹೆಸರು ಬದಲಾಯಿಸಿಕೊಂಡಿತು. ಹೀಗೆ ಏರ್‌ ಇಂಡಿಯಾವಾದ ಸಂಸ್ಥೆ 1953ರಲ್ಲಿ ಸರಕಾರದ ಗೂಡು ಸೇರಿತು. ಸರಕಾರದ ಒಡೆತನಕ್ಕೆ ಬಂದರೂ 1977ರವರೆಗೂ ಜೆಆರ್‌ಡಿ ಟಾಟಾ ಅವರೇ ಇದನ್ನು ಮುನ್ನಡೆಸುತ್ತಿದ್ದರು. ಇದೀಗ ಸರಕಾರಿ ಗೂಡಿನಿಂದ ಏರ್‌ ಇಂಡಿಯಾ ಮತ್ತೆ ಖಾಸಗಿ ಗೂಡು ಸೇರುವ, ಆ ಮೂಲಕ ತವರು ಮನೆಯತ್ತ ಹಾರಾಟ ಆರಂಭಿಸಿದೆ..error: Content is protected !! Not allowed copy content from janadhvani.com