ರಿಯಾದ್: ಕಳೆದ ಒಂದೇ ವಾರದಲ್ಲಿ ಸೌದಿ ಅರೇಬಿಯಾದಲ್ಲಿ ಒಟ್ಟು 15,693 ಅಪರಾಧಿಗಳನ್ನು ಬಂಧಿಸಲಾಗಿದೆ. ಕಾರ್ಮಿಕ, ವಸತಿ ಮತ್ತು ಗಡಿ ಉಲ್ಲಂಘಿಸುವವರನ್ನು ದೇಶದ ವಿವಿಧ ಭಾಗಗಳಿಂದ ಸೆರೆ ಹಿಡಿಯಲಾಗಿದೆ. ಸೆಪ್ಟೆಂಬರ್ 16 ರಿಂದ 22 ರವರೆಗೆ ವಿವಿಧ ಭದ್ರತಾ ಏಜೆನ್ಸಿಗಳು ಮತ್ತು ಜವಾಝಾತ್ ನಡೆಸಿದ ತಪಾಸಣೆಗಳಲ್ಲಿ ಈ ಬಂಧನಗಳು ನಡೆದಿದೆ.
ಬಂಧಿತರಲ್ಲಿ, 6,336 ನಿವಾಸಿಗಳು ಇಖಾಮ ಉಲ್ಲಂಘನೆ ಮಾಡಿದ್ದಾರೆ. ಗಡಿ ಉಲ್ಲಂಘನೆಗಾಗಿ 7,452 ಮತ್ತು ಕಾರ್ಮಿಕ ಕಾನೂನು ಉಲ್ಲಂಘನೆಗಾಗಿ 1,905 ಜನರನ್ನು ಬಂಧಿಸಲಾಗಿದೆ. ಗಡಿ ಕಾನೂನುಗಳನ್ನು ಉಲ್ಲಂಘಿಸಿ ನೆರೆಯ ದೇಶಗಳಿಂದ ಸೌದಿ ಅರೇಬಿಯಾಕ್ಕೆ ದಾಟಲು ಪ್ರಯತ್ನಿಸುತ್ತಿದ್ದ 311 ಜನರನ್ನು ಭದ್ರತಾ ಪಡೆಗಳು ಬಂಧಿಸಿವೆ. ಇವರಲ್ಲಿ ಶೇ.54 ಯೆಮೆನ್ ಮತ್ತು ಶೇ.43 ಇಥಿಯೋಪಿಯನ್ನರು. ಶೇ. ಮೂರು ಇತರ ದೇಶಗಳಿಂದ ಬಂದವರು.
ಅಕ್ರಮವಾಗಿ ಸೌದಿ ಅರೇಬಿಯಾಕ್ಕೆ ಗಡಿ ದಾಟಲು ಯತ್ನಿಸುತ್ತಿದ್ದಾಗ ಆರು ಜನರನ್ನು ಬಂಧಿಸಲಾಗಿದೆ. ಅಪರಾಧಿಗಳಿಗೆ ವಸತಿ ಮತ್ತು ಪ್ರಯಾಣ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ಅಧಿಕಾರಿಗಳು 15 ಜನರನ್ನು ಬಂಧಿಸಿದ್ದಾರೆ. ಬಂಧಿತರು ಸೇರಿದಂತೆ ಪ್ರಸ್ತುತ 85,009 ಜನರು ಶಿಕ್ಷೆಗಾಗಿ ಕಾಯುತ್ತಿದ್ದಾರೆ. ಇವರಲ್ಲಿ 75,014 ಪುರುಷರು ಮತ್ತು 9,995 ಮಹಿಳೆಯರು. ಗಡೀಪಾರು ಮಾಡುವ ಮೊದಲು ದಾಖಲೆಗಳ ತಿದ್ದುಪಡಿಗಾಗಿ 67,641 ಜನರ ವಿವರಗಳನ್ನು ಆಯಾ ದೇಶಗಳ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







