janadhvani

Kannada Online News Paper

ಗಡಿ ಭೇಟಿ ರದ್ದುಗೊಳಿಸಿದ ಸಿಎಂ- ಕೇರಳಿಗರ ಅಪಹಾಸ್ಯಕ್ಕೆ ಯುಟಿ ಖಾದರ್ ಉತ್ತರ

ಮಂಗಳೂರು: ಕೊರೊನಾ ನಿಯಂತ್ರಣದ ಕುರಿತು ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಪ್ರವಾಸ ಬೆಳೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಡೇ ಕ್ಷಣದಲ್ಲಿ ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ನಿನ್ನೆಯೇ ಕರಾವಳಿಗೆ ಆಗಮಿಸಿರುವ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದ್ದು, ಇಂದು ಗಡಿ ಭಾಗಕ್ಕೆ ಭೇಟಿ ನೀಡಲು ನಿಶ್ಚಯಿಸಿದ್ದರು. ಆದರೆ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ತಮ್ಮ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ.

ಇಂದು ಬೆಳಗ್ಗೆ 8 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಗಡಿಭಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಲಾಗಿತ್ತು. ಆದರೆ, ಗಡಿ ಭಾಗದಲ್ಲಿ ಕೇರಳಿಗರಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದರಿಂದ ಅದನ್ನು ಆಧರಿಸಿ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.ನಿನ್ನೆ ಉಡುಪಿಯಲ್ಲೇ ವಾಸ್ತವ್ಯ ಇದ್ದ ಅವರು ಇಂದು ನೇರವಾಗಿ ಉಡುಪಿಯಿಂದ‌‌ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ,ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ಕೇರಳಿಗರಿಗೆ ಯುಟಿ ಖಾದರ್ ಉತ್ತರ

ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇರಳ ಗಡಿ ಭೇಟಿ ರದ್ದು ವಿಚಾರಕ್ಕೆ ಸಂಬಂಧಿಸಿ ಕೆಲವು ಸುದ್ದಿಗಳು ಗಡಿಭಾಗದಲ್ಲಿ ಹರಿದಾಡುತ್ತಿದೆ. ಕೇರಳಿಗರ ಪ್ರತಿಭಟನೆ ಎಚ್ಚರಿಕೆ ಹಿನ್ನಲೆ ಭೇಟಿ ರದ್ದು ಮಾಡಲಾಗಿದೆ. ಕೇರಳಿಗರಿಗೆ ಹೆದರಿ ಬೊಮ್ಮಾಯಿ ಗಡಿಗೆ ಬಂದಿಲ್ಲ ಎಂದು ಕೆಲವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

“ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ‌. ಸಿಎಂ ಬಸವರಾಜ ಬೊಮ್ಮಾಯಿ ಯಾರ ಬೆದೆರಿಕೆಗೂ ಬಗ್ಗಿ ಗಡಿ ಭೇಟಿ ರದ್ದು ಮಾಡಿಲ್ಲ. ಕನ್ನಡಿಗರು ಒಟ್ಟಾದ್ರೆ ಸಿಎಂರನ್ನು ಪಾದಾಯತ್ರೆ ಮೂಲಕ ಕರೆದುಕೊಂಡು ಹೋಗ್ತೇವೆ‌. ತಲಪಾಡಿ ಗಡಿಯಿಂದ ತಿರುವನಂತಪುರದ ತನಕ ಪಾದಯಾತ್ರೆ ಮಾಡುತ್ತೇವೆ. ಅಷ್ಟು ಧೈರ್ಯ ಕರ್ನಾಟಕದ ಜನರಲ್ಲಿದೆ” ಎಂದು ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ಸಿಎಂ ಆದೇಶ ಮಾಡುತ್ತಾರೆ. ಗಡಿ ಭಾಗದ ನಿರ್ಧಾರಗಳನ್ನು ಅಧಿಕಾರಿಗಳು ಚರ್ಚಿಸಿ ತೀರ್ಮಾನ ಮಾಡುತ್ತಾರೆ‌. ಈ ಹಿಂದೆ ಕಾಸರಗೋಡಿನ ಜನರ‌ನ್ನೇ ಕೇರಳದ ಬೇರೆ ಜಿಲ್ಲೆಗೆ ಹೋಗೋಕೆ ಬಿಟ್ಟಿಲ್ಲ. ಈಗ ಸರ್ಕಾರದ ವಿರುದ್ದ ಮಾತನಾಡೋರು ಆಗ ಎಲ್ಲಿ ಹೋಗಿದ್ದರು. ಇದರ ಬಗ್ಗೆ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಹೇಳಿದ್ದಾರೆ.

ನಿಯಮ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಿ- ಡಿಸಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ‌ಕೇಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಕೂಡ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ ಎಂದು ಸೂಚಿಸಲಾಗಿದೆ. ಸ್ವಾತಂತ್ರ್ಯ ದಿನ ಆಗಿದ್ದರೂ ವೀಕೆಂಡ್ ಕರ್ಫ್ಯೂ ಇರಲಿದೆ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸ್ವಾತಂತ್ರ್ಯೋತ್ಸವ ದಿನಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ನಿಯಮ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಲು ಸೂಚನೆ ನೀಡಿದ್ದಾರೆ. ಹೆಚ್ಚು ಜನರನ್ನು ಸೇರಿಸದೇ ಧ್ವಜಾರೋಹಣ ಮಾಡಬೇಕು ಎಂದು ಆದೇಶ ನೀಡಲಾಗಿದೆ.

ದಕ್ಷಿಣ ಕನ್ನಡದಲ್ಲಿ ಕಳೆದ ಎರಡು ದಿನಗಳಿಂದ ಬೆಂಗಳೂರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ವರದಿ ಆಗಿದೆ. ಹೀಗಾಗಿ, ಸಾರ್ವಜನಿಕರು ಶಿಷ್ಟಾಚಾರ ಪಾಲಿಸಿ ಜವಾಬ್ದಾರಿಯುತವಾಗಿ ಸ್ವಾತಂತ್ರ್ಯ ದಿನ ಆಚರಿಸಲು ಸೂಚನೆ ಕೊಡಲಾಗಿದೆ. ಧ್ವಜಾರೋಹಣ ಸ್ಥಳದಲ್ಲಿ ಹೆಚ್ಚು ಜನ ಸೇರಿಸದೇ ಕೊವಿಡ್ ನಿಯಮ ಪಾಲಿಸಲು ಹೇಳಲಾಗಿದೆ. ವಾರಾಂತ್ಯ ಕರ್ಪ್ಯೂ ಹಿನ್ನೆಲೆ ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ ಮಧ್ಯೆಯೂ ಸ್ವಾತಂತ್ರ್ಯ ದಿನಾಚರಣೆಯ ಘನತೆಗೆ ಧಕ್ಕೆ ಬಾರದಂತೆ ಆಚರಿಸಬೇಕು ಎಂದು ಹೇಳಲಾಗಿದೆ.

error: Content is protected !! Not allowed copy content from janadhvani.com