janadhvani

Kannada Online News Paper

ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಆರ್ಥಿಕ ನೆರವು

ತಿರುವನಂತಪುರಂ: ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಉತ್ತರ ಪ್ರದೇಶ, ಅಸ್ಸಾಂ ಮುಂತಾದ ರಾಜ್ಯಗಳು ವಿವಿಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ. ಆದರೆ, ಕೇರಳದ ಕ್ಯಾಥೋಲಿಕ್ ಚರ್ಚೊಂದು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ನೆರವು ನೀಡುವ ಯೋಜನೆಗಳನ್ನು ಪ್ರಕಟಿಸಿದೆ.

ಸೈರೊ-ಮಲಂಕರಾ ಕ್ಯಾಥೋಲಿಕ್ ಚರ್ಚ್‌ನ ಪಟ್ಟಣಂತಿಟ್ಟ ವಿಭಾಗವು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಮಾಸಿಕ 2,000 ರೂಪಾಯಿ ನೆರವು ಸೇರಿದಂತೆ ದೊಡ್ಡ ಕುಟುಂಬಗಳಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದೆ. ಸೈರೊ-ಮಲಬಾರ್ ಚರ್ಚ್‌ನ ಪಾಲಾ ವಿಭಾಗವು ಬೃಹತ್ ಕುಟುಂಬಗಳಿಗೆ ಕೆಲವು ಯೋಜನೆಗಳನ್ನು ಪ್ರಕಟಿಸಿದ ವಾರದಲ್ಲಿಯೇ ಈ ಘೋಷಣೆ ಮಾಡಲಾಗಿದೆ.

ಈ ಯೋಜನೆಯ ಪ್ರಕಾರ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಪ್ರತಿ ತಿಂಗಳೂ 2,000 ರೂಪಾಯಿ ನೀಡಲಾಗುತ್ತದೆ. ನಾಲ್ಕನೆಯ ಮಗುವಿನ ಜನನಕ್ಕೆ ಅಗತ್ಯವಿದ್ದರೆ ಹಣಕಾಸಿನ ನೆರವು ಕೊಡಲಾಗುತ್ತದೆ. ಅಂತಹ ಕುಟುಂಬಗಳ ಸದಸ್ಯರಿಗೆ ಚರ್ಚ್‌ಗೆ ಸೇರಿದ ಕೆಲಸಗಳು ಮತ್ತು ಶಾಲಾ ದಾಖಲಾತಿಗಳಲ್ಲಿ ಆದ್ಯತೆ ನೀಡಲಾಗುತ್ತದೆ. ಆಧ್ಯಾತ್ಮಿಕ ಅಗತ್ಯಗಳಿಗೆ ಪಾದ್ರಿ ಮತ್ತು ಸನ್ಯಾಸಿನಿಯೊಬ್ಬರ ಸೇವೆಯನ್ನು ಒದಗಿಸಲಾಗುತ್ತದೆ. ವಾರ್ಷಿಕ ಸಮ್ಮಿಲನ ಕಾರ್ಯಕ್ರಮಗಳಲ್ಲಿ ಅಂತಹ ಕುಟುಂಬಗಳ ಜತೆಗೆ ವಿಭಾಗದ ಮುಖ್ಯಸ್ಥರು ಸಮಯ ಕಳೆಯಲಿದ್ದಾರೆ.

‘ತಪ್ಪು ಜನನ ನಿಯಂತ್ರಣ ನೀತಿಗಳ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ’ ಚೀನಾಕ್ಕಿಂತಲೂ ಕೆಟ್ಟದಾಗಿ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಜನಸಂಖ್ಯೆ ಇಳಿಕೆಯಾಗಿದೆ ಎಂದು ಚರ್ಚ್ ಹೇಳಿದೆ.

‘ಶಿಕ್ಷಣ ಮತ್ತು ಸಂಸ್ಕೃತಿ ವಿಚಾರದಲ್ಲಿ ಮುಂಚೂಣಿ ಸ್ಥಾನದಲ್ಲಿ ಇಲ್ಲ. ಪಟ್ಟಣಂತಿಟ್ಟದ ನಿವಾಸಿಗಳಾದ ನಾವು ಮರಣದ ಸಂಸ್ಕೃತಿಯನ್ನು ಪಾಲಿಸುತ್ತಿದ್ದೇವೆ. ರೈತರು ಕೃಷಿಯೋಗ್ಯ ಭೂಮಿಯನ್ನು ಅರಣ್ಯಗಳಾಗಿ ಪರಿವರ್ತಿಸುತ್ತಿದ್ದಾರೆ ಮತ್ತು ಇದು ವನ್ಯಜೀವಿ ದಾಳಿಗಳಿಗೆ ಎಡೆಮಾಡಿಕೊಡುತ್ತಿದೆ. ಇದರಿಂದ ಮಾಣವ ಸಂಪನ್ಮೂಲದಲ್ಲಿ ತೀಕ್ಷ್ಣ ಕುಸಿತ ಉಂಟಾಗಿದೆ. ಪಟ್ಟಣಂತಿಟ್ಟ ಸುಮಾರು ಶೇ 20ರಷ್ಟು ಮನೆಗಳು ಮುಚ್ಚಿಹೋಗಿವೆ. ಎರಡು ವಿಧಾನಸಭೆ ಚುನಾವಣೆಗಳಲ್ಲಿಯೂ ನಾವು ಸೋಲು ಅನುಭವಿಸಿದ್ದೇವೆ’ ಎಂದು ಚರ್ಚ್ ಸುತ್ತೋಲೆಯಲ್ಲಿ ಹೇಳಿದೆ.

error: Content is protected !! Not allowed copy content from janadhvani.com