ಕೇರಳದ ಕಣ್ಣೂರಿನ ಮಾಟೂಲ್ ಮೂಲದ 1.5 ವರ್ಷದ ಮುಹಮ್ಮದ್ ಎಂಬ ಮಗು ಸ್ಪನಲ್ ಮಸ್ಕ್ಯುಲರ್ ಆಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಮಗುವಿಗೆ 2 ವರ್ಷ ಆಗುವುದರೊಳಗೆ ಚಿಕಿತ್ಸೆ ನೀಡದಿದ್ದರೆ ಮಗು ಬದುಕುಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಇದರ ಚಿಕಿತ್ಸೆಗಾಗಿ ಬರೋಬ್ಬರಿ 18 ಕೋಟಿ ರುಪಾಯಿ ಆವಶ್ಯಕತೆಯಿತ್ತು. ಇದು ವಿಶ್ವದಲ್ಲೇ ಅತ್ಯಂತ ದುಬಾರಿ ಔಷಧಿ ಎಂದೂ ಹೇಳಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಕುಟುಂಬದ ಪರಿಸ್ಥಿತಿಯನ್ನು ತಿಳಿದು ಸಾಮಾಜಿಕ ಜಾಲತಾಣದಲ್ಲಿ ಧನಸಹಾಯ ಮಾಡುವಂತೆ ವಿನಂತಿಸಿದ್ದರು. ಇದಕ್ಕೂ ಮೊದಲು ಮಗುವಿನ ಸಹೋದರಿ ಕೂಡ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು.
ಮೇಲಿನ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಕೂಡಲೇ ಮಾನವ ಹೃದಯಗಳು ಆ ಕಂದಮ್ಮನಿಗೆ ಬೇಕಾಗಿ ದೊಡ್ಡದಾದ ಅಭಿಯಾನ ಆರಂಭಿಸಿದರು. ಇದರ ಫಲವಾಗಿ ವಿಶ್ವದ ಹಲವು ಕಡೆಗಳಿಂದ ಸಹಾಯಹಸ್ತ ಹರಿದು ಬಂದಿದ್ದು, ಕೇವಲ 7 ದಿನಗಳಲ್ಲಿ ಚಿಕಿತ್ಸೆ ಬೇಕಾದ 18 ಕೋಟಿ ರುಪಾಯಿ ಸಂಗ್ರಹವಾಗಿದೆ.
ಮಗುವಿನ ಚಿಕಿತ್ಸೆಗಾಗಿ ಮಿಡಿದ ಹೃದಯಗಳಿಗೆ ಧನ್ಯವಾದ ಅರ್ಪಿಸಿದ ಕುಟುಂಬ ಇನ್ನು ಯಾರೂ ಹಣ ಕಳುಹಿಸಬೇಡಿ, ಅಕೌಂಟ್ ಕ್ಲೋಸ್ ಮಾಡಿದೆ ಎಂದು ತಿಳಿಸಿದ್ದಾರೆ.