janadhvani

Kannada Online News Paper

ಪವಿತ್ರ ರಂಜಾನ್ ಕೊನೆಯ ಹತ್ತು ಪ್ರವೇಶಿಸುತ್ತಿದ್ದಂತೆ ಮಕ್ಕಾ, ಮದೀನಾದಲ್ಲಿ ಸಿದ್ಧತೆಗಳು ಪೂರ್ಣ

ಮಕ್ಕತುಲ್ ಮುಕರ್ರಮಃ: ಪವಿತ್ರ ರಂಜಾನ್ ತಿಂಗಳ ಕೊನೆಯ ಹತ್ತು ದಿನಗಳು ಪ್ರವೇಶಿಸುತ್ತಿದ್ದಂತೆ ಮಕ್ಕಾ ಮತ್ತು ಮದೀನಾದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಹರಮ್ ಮಸೀದಿಯಲ್ಲಿ ಕಿಯಾಮುಲ್ಲೈಲ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಬುಕಿಂಗ್ ಪ್ರಾರಂಭವಾಗಿದೆ. ಕೊನೆಯ ಹತ್ತರಲ್ಲಿ ಹೆಚ್ಚು ವಿಶ್ವಾಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಎರಡು ಹರಂಗಳ ಕಾರ್ಯಾಲಯ ತಿಳಿಸಿದೆ.

ರಂಜಾನ್‌ನ ಕೊನೆಯ ಹತ್ತು ದಿನಗಳು ನರಕ ಮೋಚನೆ ಮತ್ತು ಸ್ವರ್ಗದ ಪ್ರವೇಶಕ್ಕಾಗಿ ಸೃಷ್ಟಿ ಕರ್ತನಾದ ಅಲ್ಲಾಹನಲ್ಲಿ ಅತೀವ ಭಕ್ತಿಯಿಂದ ಪ್ರಾರ್ಥಿಸುವ ಹಗಲು ರಾತ್ರಿಗಳಾಗಿವೆ.

ಖುರ್ಆನ್ ನಲ್ಲಿ ಅವತರಣಗೊಂಡ, ಸಾವಿರ ತಿಂಗಳುಗಳಿಗಿಂತಲೂ ಹೆಚ್ಚು ಪವಿತ್ರವಾಗಿರುವ ಲಯ್ಲತುಲ್-ಖದ್ರ್‌ನಿಂದ ಆಶೀರ್ವದಿಸಲ್ಪಟ್ಟ ರಾತ್ರಿಯೊಂದಿಗೆ, ಈ ಹತ್ತು ದಿನಗಳಲ್ಲಿ ಪ್ರಾರ್ಥನೆಗಾಗಿ ಹರಂಗೆ ಆಗಮಿಸುವ ಜನರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಲಿದೆ.

ಕೋವಿಡ್ ನಿರ್ಬಂಧದ ಭಾಗವಾಗಿ, ಕಳೆದ ವರ್ಷ ರಂಜಾನ್ ಸಮಯದಲ್ಲಿ ಸಾರ್ವಜನಿಕರಿಗೆ ಹರಂ ಪ್ರವೇಶಿಸಲು ಅವಕಾಶವಿರಲಿಲ್ಲ. ಈ ರಂಜಾನ್ ಸಮಯದಲ್ಲಿ, ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿ ಗರಿಷ್ಠ ಸಂಖ್ಯೆಯ ವಿಶ್ವಾಸಿಗಳಿಗೆ ಪ್ರವೇಶಾನುಮತಿ ನೀಡಲಾಗಿದೆ. ಹರಮ್ನಲ್ಲಿ ಕಿಯಾಮುಲ್ಲೈಲ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಪರವಾನಗಿಗಳನ್ನು ನೀಡಲು ಆರಂಭಿಸಲಾಗಿದೆ.

ಹರಂಗೆ ಬರುವವರಿಗೆ ಸೇವೆ ಸಲ್ಲಿಸಲು 400 ಕ್ಕೂ ಹೆಚ್ಚು ಸ್ವಯಂಸೇವಕರು ಕೈ ಜೋಡಿಸಲಿದ್ದಾರೆ. ದಟ್ಟಣೆ ನಿಯಂತ್ರಣದ ಭಾಗವಾಗಿ, ಉಮ್ರಾ ಅಥವಾ ಪ್ರಾರ್ಥನೆಗೆ ಅನುಮತಿ ಪಡೆದವರ ವಾಹನಗಳನ್ನು ಮಾತ್ರ ಹರಮ್ ವಲಯಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಮಕ್ಕಾದಲ್ಲಿ ವಿವಿಧ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ಸೀಮಿತ ಸಮಯದವರೆಗೆ ವಾಹನ ನಿಲುಗಡೆ ಮಾಡಲು ಅವಕಾಶವಿರುತ್ತದೆ. ಮಕ್ಕಳಿಗೆ ಹರಮ್ ಪ್ರವೇಶಿಸಲು ಅವಕಾಶವಿಲ್ಲ.

error: Content is protected !! Not allowed copy content from janadhvani.com