janadhvani

Kannada Online News Paper

ನಿಯಂತ್ರಣ ಮೀರಿದ ಕೊರೋನಾ ಎರಡನೇ ಅಲೆ: ಮತ್ತೆ ಲಾಕ್ಡೌನ್ ಭೀತಿ

ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಹೆಚ್ಚಳ ಶೇ80.63 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ನವ ದೆಹಲಿ,ಮಾ.20; ದೇಶದಲ್ಲಿಎರಡನೇ ಕೊರೋನಾ ಅಲೆ ಶುರುವಾಗಿದೆ. ಕಳೆದ ವರ್ಷದ ಕೊನೆಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಸೋಂಕಿನ ಪ್ರಕರಣ ಇದೀಗ ಮತ್ತೆ ನಿಯಂತ್ರಣ ಮೀರಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಮಾಹಾರಾಷ್ಟ್ರ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈ ಮೀರಿದ ಹಂತಕ್ಕೆ ಬೆಳೆದಿದೆ. ಹೀಗಾಗಿ ಮತ್ತೊಮ್ಮೆ ಲಾಕ್ಡೌನ್ ಕುರಿತ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ಮತ್ತೆ ಲಾಕ್ಡೌನ್ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆಯಾದರೂ, ಜನರು ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೊರೋನಾ ನಿಯಮಾವಳಿಗಳನ್ನು ಪಾಲಿಸುತ್ತಿದ್ದಾರೆಯೇ? ಎಂದು ಕಟ್ಟುನಿಟ್ಟಾಗಿ ಗಮನಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ನಿರ್ದೆಶನ ನೀಡಿರುವ ಕೇಂದ್ರ, “ಕೊರೋನಾ ಪ್ರಕರಣಗಳು ಹಠಾತ್ ಉಲ್ಬಣವಾಗಲು ಜನರು, ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಕಿಕ್ಕಿರಿದ ಸ್ಥಳಗಳಲ್ಲಿ ಕೊರೋನಾ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದೆ ಇರುವುದೇ ಕಾರಣ. ಹೀಗಾಗಿ ಜನ ಕೊರೋನಾ ನಿಯಮಾವಳಿಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು” ಎಂದು ತಾಕೀತು ಮಾಡಿದೆ.

“ದೇಶದಲ್ಲಿ ಸುಮಾರು ಐದು ತಿಂಗಳುಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತದ ನಂತರ, ಕಳೆದ ಕೆಲವು ವಾರಗಳಿಂದ, ಈ ಸಂಖ್ಯೆಯು ದೇಶದ ಹಲವಾರು ಭಾಗಗಳಲ್ಲಿ ಹೆಚ್ಚಾಗುತ್ತಿರುವುದು ಕಾಣಿಸುತ್ತಿದೆ. ಇದು ಹೆಚ್ಚಾಗಿ ಕೊರೊನಾ ನಿಯಮಗಳ ಉಲ್ಲಂಘನೆಯಿಂದ ಬಂದಿದೆ. ಜನಸಾಮಾನ್ಯರು, ವಿಶೇಷವಾಗಿ ಜನದಟ್ಟಣೆ ಇರುವ ಸ್ಥಳಗಳಲ್ಲಿ ಕೊರೋನಾ ನಿಯಮಾವಳಿಗಳನ್ನು ಪಾಲಿಸದಿರುವುದರಿಂದ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ” ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

“ಪ್ರಕರಣಗಳ ಸಂಖ್ಯೆಯಲ್ಲಿನ ಹೊಸ ಏರಿಕೆ ಮತ್ತು ಮುಂಬರುವ ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮುಖ್ಯ” ಎಂದು ಕೇಂದ್ರ ಗೃಹ ಕಾರ್ಯದರ್ಶಿ ಪತ್ರದಲ್ಲಿ ಸೂಚಿಸಿದ್ದಾರೆ.

ಕಳೆದ ಐದು ತಿಂಗಳುಗಳ ನಂತರ, ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಕೊರೊನಾ ಆತಂಕಕಾರಿಯಾಗಿ ಉಲ್ಬಣವಾಗಿರುವುದರಿಂದ ಗುಜರಾತ್ ಪಂಜಾಬ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಮತ್ತೆ ಶಾಲೆಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸಲಾಗಿದೆ.

ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಹೆಚ್ಚಳ ಶೇ80.63 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಪ್ರಸ್ತುತ ದೇಶದಲ್ಲಿ 40,953 ಹೊಸ ಕೊರೋನಾ ಪ್ರಕರಣಗಳಿವೆ. ಈ ಸಂಖ್ಯೆ ನವೆಂಬರ್ 29 ರ ನಂತರದ ಗರಿಷ್ಠ ದೈನಂದಿನ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತವೆ. ಕಳೆದ ವಾರದಿಂದ ದೇಶದಲ್ಲಿ 20,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ

error: Content is protected !! Not allowed copy content from janadhvani.com