janadhvani

Kannada Online News Paper

1-5ನೇ ತರಗತಿ ಆರಂಭಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಸರ್ಕಾರದ ಆದೇಶ ಮೀರಿ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೂ ತರಗತಿ ಭೋದನೆ ಆರಂಭಿಸಿದ ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಕ್ ನೀಡಿದ್ದಾರೆ.

ಸರ್ಕಾರದ ಅನುಮತಿ ಇಲ್ಲದಿದ್ದರೂ ರಾಜ್ಯದಲ್ಲಿ ಕೆಲ ಶಾಲೆಗಳು 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೂ ತರಗತಿ ಭೋದನೆ ಆರಂಭಿಸಿವೆ. ನಿಯಮ ಮೀರಿ 1-5ನೇ ತರಗತಿ ಆರಂಭಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಅನುಮತಿಯೊಂದಿಗೆ 6ನೇ ತರಗತಿಯಿಂದ ಮೇಲ್ಪಟ್ಟ ತರಗತಿಗಳನ್ನು ಮಾತ್ರವೇ ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಆದರೆ ರಾಜ್ಯದ ಹಲವೆಡೆ ಕೆಲವು ಖಾಸಗಿ ಶಾಲೆಗಳು 1 ರಿಂದ 5ನೇ ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂತಹ ಶಾಲೆಗಳ ಕುರಿತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಲೂಕು ಮಟ್ಟದಲ್ಲಿ ಪರಿಶೀಲನಾ ತಂಡಗಳನ್ನು ರಚಿಸಿ, ಈ ರೀತಿ ಅನಧಿಕೃತವಾಗಿ 1 ರಿಂದ 5ನೇ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳ/ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಕೂಡಲೇ ಸುತ್ತೋಲೆ ಹೊರಡಿಸಬೇಕೆಂದು ಸುರೇಶ್ ಕುಮಾರ್ ಇಲಾಖೆಯ ಆಯಕ್ತರು ಮತ್ತು ಅಪರ ಆಯುಕ್ತರುಗಳಿಗೆ ಸೂಚನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.

ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣ ಟ್ವಿಟರ್ ಟ್ವೀಟ್ ಮಾಡಿದ್ದ ಸಚಿವ ಸುಧಾಕರ್ ಅವರು, ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸರ್ಕಾರ ಪ್ರಸ್ತುತ 6-10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮಾತ್ರ ತರಗತಿ ಬೋಧನೆಗೆ ಅವಕಾಶ ನೀಡಿದೆ. ಆದರೆ, ಕೆಲ ಖಾಸಗಿ ಶಾಲೆಗಳು ಅನುಮತಿ ಇಲ್ಲದೆ 1-5ನೇ ತರಗತಿ ಮಕ್ಕಳಿಗೂ ಶಾಲೆಗೆ ಹಾಜರಾಗುವಂತೆ ಸೂಚಿಸಿ ತರಗತಿ ನಡೆಸುತ್ತಿವೆ. ಅಂತಹ ಶಾಲೆಗಳ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

error: Content is protected !! Not allowed copy content from janadhvani.com