ಹೊಸದಿಲ್ಲಿ: ಖಾಸಗಿ ಆಸ್ಪತ್ರೆಗಳು ಕೊರೊನಾ ನಿರೋಧಕ ಲಸಿಕೆಗೆ ಗರಿಷ್ಠ 250 ರೂಪಾಯಿ ಶುಲ್ಕ ವಿಧಿಸಬಹುದು ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ.
ಎರಡನೇ ಹಂತದ ಲಸಿಕೆ ಅಭಿಯಾನದ ಸಂಬಂಧ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸರಕಾರ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು, “ಖಾಸಗಿ ಆಸ್ಪತ್ರೆಗಳು 500 ರೂ. ದರ ವಿಧಿಸಬಹುದು,” ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಈ ವೇಳೆ ದರದ ವಿಷಯದಲ್ಲಿ ವದಂತಿ ನಂಬ ಬೇಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮನವಿ ಮಾಡಿತ್ತು. ಸೀರಂ ಇನ್ಸ್‌ಟಿಟ್ಯೂಟ್ ‘ಕೋವಿಶೀಲ್ಡ್’ ಅನ್ನು ಪ್ರತಿ ಡೋಸ್‌ಗೆ 200 ರೂ. ಹಾಗೂ ಭಾರತ್ ಬಯೋಟೆಕ್ ‘ಕೊವ್ಯಾಕ್ಸಿನ್’ ಅನ್ನು ಪ್ರತಿ ಡೋಸ್‌ಗೆ 295 ರೂ. ಮೂಲದರದಲ್ಲಿ ಸರಕಾರಕ್ಕೆ ಪೂರೈಕೆ ಮಾಡುತ್ತಿವೆ. ಇದಕ್ಕೆ ತೆರಿಗೆ ಪ್ರತ್ಯೇಕ. ಲಸಿಕೆ ಹಾಕಿಸಿಕೊಳ್ಳುವವರಿಗೆ ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಪೈಕಿ ತಮಗೆ ಯಾವುದು ಇಷ್ಟವೋ ಅದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇಲ್ಲ.