ದಮ್ಮಾಮ್| ವಿದೇಶಗಳಿಂದ ಭಾರತಕ್ಕೆ ಮರಳುವ ಎಲ್ಲ ಪ್ರಯಾಣಿಕರಿಗೆ ಕೋವಿಡ್ ನೆಗಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾಪದ ವಿರುದ್ಧ ವಲಸಿಗರೆಡೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.
ಕಳೆದ ಜೂನ್‌ನಲ್ಲಿ ಜಾರಿಗೆ ತರಲಾದ ಇದೇ ಕಾನೂನನ್ನು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಸರ್ಕಾರಗಳ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಗುರಿಯೊಂದಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿವಿಧ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ವಿಭಿನ್ನ ದರಗಳನ್ನು ವಿಧಿಸುತ್ತಿದೆ.
ಕೋವಿಡ್ ಪರೀಕ್ಷೆಯ ಬಗ್ಗೆ ಚಿಂತಿತರಾಗಿರುವ ವಲಸಿಗರು
ಸೌದಿ ಅರೇಬಿಯಾ ಸಹಿತವಿರುವ ಕೊಲ್ಲಿ ರಾಷ್ಟ್ರಗಳಿಂದ 72 ಗಂಟೆಗಳ ಅವಧಿಯ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರುವವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ಇದೆ. ಈ ದಾಖಲೆಯನ್ನು ಭಾರತದಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.ವಿದೇಶದಿಂದ ಹಿಂದಿರುಗುವವರಲ್ಲಿ ಹೆಚ್ಚಿನವರು ಕೋವಿಡ್ ಹರಡುವಿಕೆಯಿಂದಾಗಿ ಕೆಲಸವಿಲ್ಲದೆ ತಿಂಗಳುಗಟ್ಟಲೆ ತಮ್ಮ ಕೋಣೆಗಳಲ್ಲಿದ್ದು,ಅವರ ಪ್ರಯಾಣ ಮತ್ತು ಶುಲ್ಕವನ್ನು ವಲಸಿಗ ಸಂಸ್ಥೆಗಳು ಮತ್ತು ಸ್ನೇಹಿತರು ಪಾವತಿಸುತ್ತಿದ್ದಾರೆ. ಭಾರತದ ಹೊಸ ಕಾನೂನಿನೊಂದಿಗೆ, ಅನೇಕ ಜನರು ತಮ್ಮ ಪ್ರಯಾಣವನ್ನು ರದ್ದುಗೊಳಿಸಬೇಕಾದ ಅವಸ್ಥೆ ಬಂದೊದಗಿದೆ.
ರಾಜಕೀಯ ಪಕ್ಷಗಳು ಮೌನವೇಕೆ?
ವಿಮಾನ ನಿಲ್ದಾಣಗಳಲ್ಲಿ ಭಾರತಕ್ಕೆ ಮರಳಿದ ವಲಸಿಗರ ದುಃಸ್ಥಿತಿಯ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿದರೂ, ರಾಜಕೀಯ ಪಕ್ಷಗಳು ಕಣ್ಣುಮುಚ್ಚಿವೆ.
ಮುಗ್ಧ ಮಕ್ಕಳನ್ನೂ ಬಿಡದ ಕೋವಿಡ್ ಟೆಸ್ಟ್
ವಲಸಿಗರು ತಮ್ಮ ಪುಟ್ಟ ಮಕ್ಕಳೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಹೊಸ ನಿರ್ದೇಶನದೊಂದಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ತಪಾಸಣೆ ಆರಂಭಿಸಲಾಗಿದೆ ಮತ್ತು ಪ್ರತಿ ವಿಮಾನ ನಿಲ್ದಾಣದಲ್ಲಿ ವಿಭಿನ್ನ ದರಗಳನ್ನು ಪರಿಚಯಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ನ ಮರೆಯಲ್ಲಿ ದೊಡ್ಡ ಮೋಸದ ಗ್ಯಾಂಗ್‌ಗಳು ಕಾರ್ಯಾಚರಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದೆ. ಸಾಪ್ ಸಂಗ್ರಹಿಸಲು ಮತ್ತು ಪರೀಕ್ಷಿಸಲು ಸರ್ಕಾರ ಖಾಸಗಿ ಲ್ಯಾಬ್‌ಗಳಿಗೆ ಅನುಮತಿ ನೀಡಿದೆ.
ಹೊಸ ಪ್ರಯಾಣದ ಮಾನದಂಡಗಳನ್ನು ರದ್ದುಪಡಿಸಬೇಕು: ಐಸಿಎಫ್
ವಿದೇಶದಿಂದ ಭಾರತೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವವರು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಮತ್ತು ವೆಚ್ಚವನ್ನು ಸ್ವತಃ ಭರಿಸಬೇಕು ಎಂಬ ಕೇಂದ್ರ ಸರ್ಕಾರದ ಹೊಸ ಪ್ರಯಾಣದ ಕಾನೂನನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಐಸಿಎಫ್ ಕೊಲ್ಲಿ ಮಂಡಳಿ ಕರೆ ನೀಡಿದೆ.
ಹೊಸ ಪ್ರಸ್ತಾಪವು ಆರ್ಥಿಕವಾಗಿ ಕಷ್ಟಪಡುತ್ತಿರುವ ಮತ್ತು ಉದ್ಯೋಗ ಕಳೆದುಕೊಂಡು ಹಾಗೂ ಚಿಕಿತ್ಸೆಗಾಗಿ ಮನೆಗೆ ಮರಳುವವರಿಗೆ ಬಲು ದೊಡ್ಡ ಆರ್ಥಿಕ ಹೊರೆಯಾಗಲಿದೆ. ಪ್ರಾಯ ವ್ಯತ್ಯಾಸವಿಲ್ಲದೆ ವಿದೇಶದಿಂದ ಬರುವವರಿಗೆ 72 ಗಂಟೆಗಳ ಒಳಗಿನ ನಕಾರಾತ್ಮಕ ಪ್ರಮಾಣಪತ್ರ ಕಡ್ಡಾಯವಾಗಿದೆ ಎಂದು ಮಾರ್ಗಸೂಚಿ ಹೇಳುತ್ತದೆ. ಅಂತಹ ಪ್ರಮಾಣಪತ್ರದೊಂದಿಗೆ ವಿದೇಶದಿಂದ ಆಗಮಿಸುವ ವ್ಯಕ್ತಿಯು ತನ್ನ ಸ್ವಂತ ಖರ್ಚಿನಲ್ಲಿ ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂಬ ನಿಯಮ ಅನಗತ್ಯ.
ವಿದೇಶಗಳಲ್ಲಿನ ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗಳು ಉಚಿತವಾಗಿದ್ದರೂ, ಇಲ್ಲಿನ ವೆಚ್ಚವನ್ನು ತಮ್ಮದೇ ಆದ ಪ್ರಜೆಗಳು ಭರಿಸಬೇಕು ಎಂಬುದು ಸ್ವೀಕಾರಾರ್ಹವಲ್ಲ ಆದ್ದರಿಂದ ತಕ್ಷಣದ ಪರಿಹಾರಕ್ಕಾಗಿ ಐಸಿಎಫ್ ಒತ್ತಾಯಿಸಿದೆ.