ಕೋಲ್ಕತ್ತಾ,ಫೆ.19: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಚಿವ ಅಮಿತ್ ಶಾ ಫೆಬ್ರವರಿ. 22 ರಂದು ಬೆಳಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಅಥವಾ ವಕೀಲರ ಮೂಲಕ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಸಮನ್ಸ್ ಜಾರಿಗೊಳಿಸಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 500 ರ ಅಡಿಯಲ್ಲಿ ಮಾನಹಾನಿ ಆರೋಪಕ್ಕೆ ಉತ್ತರಿಸಲು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಅಮಿತ್ ಶಾ ಅವರ ಹಾಜರಾತಿ ಅಗತ್ಯ ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.
ಘಟನೆಯ ಬಗ್ಗೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯ ವಕೀಲರಾದ ಸಂಜಯ್ ಬಸು ಪತ್ರಿಕಾ ಹೇಳಿಕೆ ನೀಡಿದ್ದು, “ಗೃಹ ಸಚಿವ ಅಮಿತ್ ಶಾ 2018 ರ ಆಗಸ್ಟ್ 11 ರಂದು ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ನಡೆದ ಬಿಜೆಪಿಯ ಸಮಾವೇಶದಲ್ಲಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು. ಇದೇ ಕಾರಣಕ್ಕೆ ಕೇಂದ್ರ ಸಚಿವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗಿತ್ತು” ಎಂದು ತಿಳಿಸಿದ್ದಾರೆ.