janadhvani

Kannada Online News Paper

ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ – ಅಸದುದ್ದೀನ್ ಉವೈಸಿ

ಕಲಬುರ್ಗಿ, ಜ.31: ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಉಗ್ರಗಾಮಿ ಎಂದು ಎಐಎಂಐಎಂ ಸಂಸ್ಥಾಪಕ, ಸಂಸದ ಅಸದುದ್ದೀನ್ ಓವೈಸಿ ಹೇಳಿದ್ದಾರೆ.ಕಲಬುರ್ಗಿಯ ಮೊಘಲ್ ಗಾರ್ಡನ್ ನಲ್ಲಿ ಎ.ಐ.ಎಂ.ಐ.ಎಂ ಸಮಾವೇಶ ಉದ್ದೇಶಿಸಿ ಮಾತನಾಡಿದ ಓವೈಸಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ ಆಗಿದ್ದಾನೆ. ಗೋಡ್ಸೆ ಗಾಂಧೀಜಿ ಹತ್ಯೆ ಮಾಡುವುದರ ಹಿಂದೆ ಸಾವರಕರ್, ನಾರಾಯಣ ಆಪ್ಟೆ ಪಿತೂರಿ ಅಡಗಿತ್ತು. ಜವಹರಲಾಲ್ ನೆಹರೂ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಸರಿಯಾಗಿ ತನಿಖೆ ಮಾಡಿದ್ರೆ ಸಂಘ ಪರಿವಾರದ ಮುಖಂಡರೆಲ್ಲರೂ ಜೈಲಿನಲ್ಲಿರುತ್ತಿದ್ದರು. ಆದರೆ ಅದನ್ನು ನೆಹರೂ ಸರ್ಕಾರ ಮಾಡಲಿಲ್ಲ. ಸಂಘ ಪರಿವಾರ ಭದ್ರವಾಗಿ ಬೇರೂರಲು ಕಾಂಗ್ರೆಸ್ ಸಹ ಕಾರಣ ಎಂದು ಕಾಂಗ್ರೆಸ್ ಮತ್ತು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ದೇಶವನ್ನು ಗೋಡ್ಸೆ ದಾರಿಯಲ್ಲಿ ಕೊಂಡೊಯ್ಯಲಾಗುತ್ತಿದೆ. ಗೋಡ್ಸೆ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಹುನ್ನಾರ ಹೊಂದಿದ್ದ. ಆತನ ಉದ್ದೇಶವನ್ನು ಈಡೇರಿಸಲು ಗೋಡ್ಸೆ ಸಂತತಿ ಹೊರಟಿದೆ ಎಂದು ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ರಾಮನ ಹೆಸರಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಲಾಗ್ತಿದೆ. ಹಿಂದೂ – ಮುಸ್ಲಿಂ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕಲಾಗ್ತಿದೆ. ಈ ದೇಶವನ್ನು ಉಳಿಸಬೇಕಂದ್ರೆ ಗೋಡ್ಸೆ ಅವರನ್ನು ತಿರಸ್ಕರಿಸುವ ಜನರಿಂದ ಮಾತ್ರ ಸಾಧ್ಯ ಎಂದರು. ಪ್ರಧಾನಿ ಮೋದಿ ಅವ್ರು ಒಂದು ಕಡೆ ಗಾಂಧೀಜಿ ಅವರನ್ನು ಆರಾಧಿಸ್ತಾರೆ. ಮತ್ತೊಂದು ಕಡೆ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನೂ ಆರಾಧಿಸ್ತಾರೆ. ಪ್ರಧಾನಿ ಸ್ಥಾನದಲ್ಲಿದ್ದವರಿಗೆ ಈ ರೀತಿಯ ದ್ವಂದ್ವ ಸರಿಯಲ್ಲ ಎಂದರು.

ಖಮರುಲ್ ಇಸ್ಲಾಂ ನಿಧನದ ನಂತರ ಕಲಬುರ್ಗಿ ನಗರದಲ್ಲಿ ಅಲ್ಪಸಂಖ್ಯಾತರಿಗೆ ರಾಜಕೀಯ ಅಭದ್ರತೆ ಸೃಷ್ಟಿಯಾಗಿದೆ. ಹೀಗಾಗಿಯೇ ಎ.ಐ.ಎಂ.ಐ.ಎಂ ಸಂಘಟನೆ ಮಾಡೋಕೆ ಕಲಬುರ್ಗಿಗೆ ಬಂದಿದ್ದೇನೆ. ಬ್ಯಾಂಡ್ ಬಾಜಾಕಿ ಪಾರ್ಟಿ ಕಾಂಗ್ರೆಸ್ ನಮ್ಮ ಪಕ್ಷವನ್ನು ಬಿಜೆಪಿ ಪಕ್ಷದ ಬಿ ಟೀಂ ಅಂತ ಹೇಳ್ತಿತ್ತು. ಈಗ ವೆಸ್ಟ್ ಬೆಂಗಾಲ್ ಗೆ ಹೋದ್ರೆ ಅಲ್ಲಿಯೂ ಎಂ.ಐ.ಎಂ.ಎಂ.ನ್ನು ಬಿಜೆಪಿ ಬಿ ಟೀಂ ಅಂತ ಟಿ.ಎಂ.ಸಿ ಹೇಳುತ್ತೆ.

ಎ.ಐ.ಎಂ.ಐ.ಎಂ. ಮೇಲೆ ಗೂಬೆ ಕೂರಿಸೋ ಕೆಲಸ ಎಲ್ಲರಿಂದಲೂ ನಡೀತಿದೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಎಂ.ಐ.ಎಂ.ಐ.ಎಂ. ತನ್ನ ಶಕ್ತಿ ಪ್ರದರ್ಶನ ಮಾಡಲಿದೆ. ಕೆಲ ಪಕ್ಷಗಳು ಜಾತ್ಯತೀತೆಯ ಜಪ ಮಾಡ್ತಿವೆ. ಜಾತ್ಯಾತೀತತೆ ಹೆಸರಲ್ಲಿ ಮುಸ್ಲಿಂರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಬೇರೆ ಪಕ್ಷಗಳು ಜಾತ್ಯತೀತತೆ ಜಪ ಮಾಡುತ್ತಾ ಬಿಜೆಪಿಗೆ ಲಾಭ ಮಾಡಿಕೊಡ್ತಿವೆ. ಜಾತ್ಯತೀತತೆ ಬಿಟ್ಟುಬಿಡಿ, ಎಐಎಂಐಎಂ ಪಕ್ಷವನ್ನು ಬೆಂಬಲಿಸಿ ಎಂದು ಓವೈಸಿ ಕರೆ ನೀಡಿದರು. ಮುಂದಿನ ದಿನಗಳಲ್ಲಿ ಜನಪರ ಹೋರಾಟಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಮುಸ್ಲಿಂ ಸಮುದಾಯದ ಹಿತ ಕಾಪಾಡ್ತೇನೆ ಎಂದು ಓವೈಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com