janadhvani

Kannada Online News Paper

ಪಟ್ಟು ಬಿಡದ ರೈತರು: 11ನೇ ಸುತ್ತಿನ ಮಾತುಕತೆಯೂ ವಿಫಲ- ಪ್ರತಿಭಟನೆ ಮತ್ತಷ್ಟು ತೀವ್ರ

ನವದೆಹಲಿ,ಜ.22: ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಕೇಂದ್ರ ಸಚಿವರು ಮತ್ತು ರೈತ ಸಂಘಟನೆಗಳೊಂದಿಗೆ ಶುಕ್ರವಾರ ನಡೆದ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ.

ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 11ನೇ ಸುತ್ತಿನ ಮಾತುಕತೆಯಲ್ಲೂ ತಮ್ಮ ಪಟ್ಟು ಬಿಡದ ರೈತರು, ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣ ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಗ್ಯಾರಂಟಿ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೈತರ ಬೇಡಿಕೆಗೆ ಬಗ್ಗದ ಸರ್ಕಾರ, ಸದ್ಯ ಒಂದೂವರೆ ವರ್ಷಗಳ ಕಾಲ ಈ ಕೃಷಿ ಕಾಯಿದೆಗಳನ್ನು ತಡೆಹಿಹಿಡಿಯುವ ತನ್ನ ಪ್ರಸ್ತಾಪವನ್ನು ಪರಿಗಣಿಸುವುದಾದರೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಿದ್ದ ಎಂದು ಹೇಳಿದೆ. ಹೀಗಾಗಿ ಮುಂದಿನ ಸುತ್ತಿನ ಮಾತುಕತೆಯ ದಿನಾಂಕವೂ ನಿರ್ಧರವಾಗಿಲ್ಲ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಹಾಗೂ 41 ರೈತ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com