ಕಲ್ಲಿಕೋಟೆ|ಎಸ್‌ವೈಎಸ್ ಕಾರ್ಯಕರ್ತ ಅಬ್ದುರಹ್ಮಾನ್ ಔಫ್ ಅವರನ್ನು ಕಾಸರ್‌ಗೋಡ್ ಕಲ್ಲುರಾವಿಯಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ಕ್ರೂರವಾಗಿ ಇರಿದು ಕೊಂದಿರುವುದನ್ನು ಕೇರಳ ಮುಸ್ಲಿಂ ಜಮಾಅತ್ ತೀವ್ರವಾಗಿ ಖಂಡಿಸಿದೆ.
ತನ್ನ ವಿರುದ್ಧ ಮತ ಚಲಾಯಿಸುವವರನ್ನು ಮತ್ತು ತನ್ನ ನಿಲುವಿಗೆ ತಲೆಬಾಗದವರನ್ನು ದೈಹಿಕವಾಗಿ ನಿರ್ನಾಮ ಮಾಡುವಂತಹ ತಲವಾರು ರಾಜಕಾರಣವನ್ನು ಮುಸ್ಲಿಂ ಲೀಗ್ ಕೊನೆಗೊಳಿಸಬೇಕು ಮತ್ತು ನಾಯಕತ್ವವು ಕಾರ್ಯಕರ್ತರನ್ನು ನಿಯಂತ್ರಿಸಲು ಸಿದ್ಧರಾಗಬೇಕು ಎಂದು ಕೇರಳ ಮುಸ್ಲಿಂ ಜಮಾಅತ್ ಒತ್ತಾಯಿಸಿದೆ.
ಸಮಕಾಲೀನ ರಾಜಕೀಯ ಸೋಲುಗಳನ್ನು ಮುಚ್ಚಿಹಾಕಲು ಮುಸ್ಲಿಂ ಲೀಗ್ ಇಂತಹ ಅಮಾನವೀಯ ಹತ್ಯೆಗಳನ್ನು ಆಶ್ರಯಿಸುತ್ತಿದೆ. ಮುಗ್ಧರ ರಕ್ತ ಚೆಲ್ಲುವ ಮೂಲಕ ಲಭಿಸುವ ತಾತ್ಕಾಲಿಕ ರಾಜಕೀಯ ಲಾಭಗಳು ಬಹುದೊಡ್ಡ ರಾಜಕೀಯ ದುಷ್ಪರಿಣಾಮಗಳಿಗೆ ಹೇತುವಾಗಲಿದೆ ಎಂದು ಲೀಗ್ ನಾಯಕತ್ವಕ್ಕೆ ಮುಸ್ಲಿಂ ಜಮಾಅತ್ ತಾಕೀತು ನೀಡಿದೆ.
ಸುನ್ನಿ ಚಳುವಳಿಯು ಈ ದುರಹಂಕಾರವನ್ನು ಪ್ರಜಾಸತ್ತಾತ್ಮಕವಾಗಿ ಮತ್ತು ಕಾನೂನುಬದ್ಧವಾಗಿ ಎದುರಿಸಲಿದೆ.ಅಬ್ದುಲ್ ರಹ್ಮಾನ್ ಔಫ್ ಹತ್ಯೆಗೆ ಕಾರಣರಾದವರು ಮತ್ತು ಅದಕ್ಕೆ ಪ್ರಚೋದಿಸಿದವರನ್ನು ಆದಷ್ಟು ಬೇಗ ಕಾನೂನಿನ ಮುಂದೆ ತರಲು ಸರ್ಕಾರ ಸಮರ್ಥವಾಗಿ ಕೆಲಸ ಮಾಡಬೇಕು ಎಂದು ಮುಸ್ಲಿಮ್ ಜಮಾಅತ್ ಆಗ್ರಹಿಸಿದೆ.
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಮಾರಾಯಮಂಗಲಂ ಅಬ್ದುರಹ್ಮಾನ್ ಫೈಝಿ, ವಂಡೂರ್ ಅಬ್ದುರಹ್ಮಾನ್ ಫೈಝಿ, ಸಿ ಮುಹಮ್ಮದ್ ಫೈಝಿ, ಎ ಸೈಫುದ್ದೀನ್ ಹಾಜಿ, ಪ್ರೊ. ಎ.ಕೆ.ಅಬ್ದುಲ್ ಹಮೀದ್, ಪ್ರೊ. ಯುಸಿ ಅಬ್ದುಲ್ ಮಜೀದ್, ಎನ್ ಅಲಿ ಅಬ್ದುಲ್ಲಾ, ಸಿಪಿ ಸೈದಲವಿ ಮಾಸ್ಟರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.