ಮಂಗಳೂರು,ಡಿ. 7: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ದೇಶಾದ್ಯಂತ ವಿವಿಧ ರೈತ ಸಂಘಟನೆಗಳು ಡಿ. 8, ನಾಳೆ ಭಾರತ್ ಬಂದ್ಗೆ ಕರೆ ನೀಡಿವೆ. ರೈತರ ಈ ಹೋರಾಟಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳೂ ಕೂಡ ಬೆಂಬಲ ನೀಡಿವೆ.
ಕೇಂದ್ರ ಸರಕಾರದ ರೈತ ವಿರೋಧಿ ಫಾರ್ಮರ್ಸ್ ಬಿಲ್ ವಿರೋಧಿಸಿ ರೈತರು ಆಯೋಜಿಸಿರುವ ಭಾರತ್ ಬಂದ್ ಪ್ರತಿಭಟನೆಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ನೀಡುತ್ತಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ತಿಳಿಸಿದ್ದಾರೆ.
ಪಂಜಾಬ್ ರೈತರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸತತ 13 ದಿನಗಳಿಂದಲೂ ನಿರಂತರವಾಗಿ ಪ್ರತಿಭಟನೆಗಳನ್ನ ಮಾಡುತ್ತಾ ಬಂದಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತುಗಳ ಸಂಧಾನ ಸಭೆಗಳು ವಿಫಲವಾಗಿವೆ. ಎಂಎಸ್ಪಿಯನ್ನ ಲಿಖಿತವಾಗಿ ಅಳವಡಿಸುವ ಕೇಂದ್ರದ ಭರವಸೆ ರೈತರಿಗೆ ಸಮಾಧಾನ ತಂದಿಲ್ಲ. ಕೃಷಿ ಕಾಯ್ದೆಗಳನ್ನ ಕೈಬಿಡುವವರೆಗೂ ರೈತ ಸಂಘಟನೆಗಳ ಹೋರಾಟ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ.
ಮೊನ್ನೆ ನಡೆದ ಕರ್ನಾಟಕ ಬಂದ್ ನ ನೇತೃತ್ವ ವಹಿಸಿದ್ದ ವಾಟಾಳ್ ನಾಗರಾಜ್ ಅವರ ಕನ್ನಡಪರ ಸಂಘಟನೆಗಳ ಒಕ್ಕೂಟ ಇದೀಗ ಭಾರತ್ ಬಂದ್ಗೂ ಬೆಂಬಲ ಘೋಷಿಸಿದೆ. ಬೀದಿ ಬದಿ ವ್ಯಾಪಾರಿಗಳ ಸಂಘ ಕೂಡ ರೈತರ ಹೋರಾಟಕ್ಕೆ ಕೈಜೋಡಿಸಿದೆ. ಶಾಲೆಗಳನ್ನ ತೆರೆಯುವ ವಿಚಾರದಲ್ಲಿ ಸರ್ಕಾರದ ನೀತಿ ಬಗ್ಗೆ ಅಸಮಾಧಾನ ಹೊಂದಿರುವ ಖಾಸಗಿ ಶಾಲೆಗಳ ಒಕ್ಕೂಟ ಕೂಡ ನಾಳೆಯ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ನಾಳೆ ಒಂದು ದಿನದ ಮಟ್ಟಿಗೆ ಆನ್ಲೈನ್ ತರಗತಿಗಳನ್ನ ಶಾಲೆಗಳು ರದ್ದು ಮಾಡಿ ಬಂದ್ನಲ್ಲಿ ಭಾಗವಹಿಸಲಿವೆ ಎಂಬ ಮಾಹಿತಿ ತಿಳಿದುಬಂದಿದೆ. ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ ಅಖಿಲ ಭಾರತ ವ್ಯಾಪಾರ ಒಕ್ಕೂಟ ಸಂಘಟನೆ ಎಐಟಿಯುಸಿ ನಾಳೆಯ ಬಂದ್ಗೆ ಸಂಪೂರ್ಣ ಬೆಂಬಲ ನೀಡಿದೆ.