janadhvani

Kannada Online News Paper

ಶೈಖ್ ಜೀಲಾನಿ {ರ}: ನೇರ ನುಡಿಯ ದಾರಿದೀಪ

✒️ ಕೊಡಂಗಾಯಿ ಕಾಮಿಲ್ ಸಖಾಫಿ

ಯಾತ್ರಾ ಸಂಘದೊಂದಿಗೆ ಆ ಕಂದಮ್ಮ ಹೆಜ್ಜೆಯಿಡುತ್ತಿದ್ದಾನೆ. ವ್ಯಾಪಾರ ತಂಡವು ಗುಡ್ಡ – ಬೆಟ್ಟಗಳನ್ನು ದಾಟಿ ಮುನ್ನಡೆಯುತ್ತಿದೆ. ಭಯ ಆವರಿಸುವ ಪ್ರದೇಶಕ್ಕೆ ತಲುಪಿದ ಸಂದರ್ಭ. ಇನ್ನೊಂದೆಡೆ ಆಶ್ರಯಕ್ಕಾಗಿ ಯಾರೂ ಕೂಡ ಸಿಗದ ಜಾಗ. ಡಕಾಯಿತರ ತಂಡವೊಂದು ತಟ್ಟನೆ ಎದುರಿನಿಂದ ಪ್ರತ್ಯಕ್ಷಗೊಂಡಿತು. ಯಾತ್ರಾ ತಂಡವು ದಿಗ್ಭ್ರಮೆಗೊಂಡಿತ್ತು. ಸಂಘದ ಸದಸ್ಯರೆಲ್ಲರನ್ನೂ ಪರಿಶೀಲನೆಗೊಳಪಡಿಸಿ ಅವರಲ್ಲಿರುವ ವಸ್ತುಗಳನ್ನೆಲ್ಲಾ ವಶಪಡಿಸಿಕೊಂಡರು. ಕೊನೆಯ ಸರದಿಯು ಪುಟ್ಟ ಬಾಲಕನದ್ದಾಗಿತ್ತು. ಅವರಲ್ಲೊಬ್ಬ ಎದುರು ಬಂದು ಕೇಳಿಯೇ ಬಿಟ್ಟ :
“ನಿನ್ನಲ್ಲೇನಿದೆ.?”
“40 ಚಿನ್ನದ ನಾಣ್ಯಗಳು”
ಕೇಳಿದ ಪ್ರಶ್ನೆಗೆ ತಕ್ಕ ಉತ್ತರ.
ದರೋಡೆಕೋರರು ಪರಸ್ಪರ ಮುಖ ನೋಡಿಕೊಂಡರು. ಅವರಿಗೆ ನಂಬಿಕೆ ಬರಲಿಲ್ಲ. ಕಾರಣ ಅಪಹರಿಸಲ್ಪಡುವಾಗ ಯಾರು ಸತ್ಯ ಹೇಳುತ್ತಾರೆ.!
ಇಷ್ಟು ಚಿಕ್ಕ ಪ್ರಾಯದವನಾಗಿದ್ದರೂ ಪರಿಹಾಸ್ಯ ಮಾಡುವುದರಲ್ಲಿ ನಿಪುಣನಿರಬಹುದು ಎಂದು ಅವರ ಮುಖ ಮಾತನಾಡಿತು.
“ನಿನ್ನಲ್ಲಿ ಏನಾದರೂ ಇದೆಯಾ.?”
ಇನ್ನೊಬ್ಬರ ಧ್ವನಿಯಲ್ಲಿ ಗದರಿಸುವ ಶೈಲಿಯಿತ್ತು.
ಆ ಪುಟಾಣಿ ಪೋರನ ಉತ್ತರದಲ್ಲಿ ಬದಲಾವಣೆಯಿರಲಿಲ್ಲ.
“40 ಚಿನ್ನದ ನಾಣ್ಯಗಳು ಇವೆ”
ಬಳಿಕ ಒಂದಿಬ್ಬರು ಸೇರಿ ಆ ಕಂದಮ್ಮನ ಶರೀರಕ್ಕೆ ಕೈಹಾಕಿದರು. ಹಲ್ಲೆ ನಡೆಸುವ ಉದ್ದೇಶದಿಂದಲ್ಲ, ಬದಲು ಮಗುವಿನ ನುಡಿಯಲ್ಲಿ ನೇರವಾದುದು ಏನಾದರೂ ಇದೆಯಾ ಎಂದು ತಿಳಿಯಲು ಮಾತ್ರವಾಗಿತ್ತು.
ಹೌದು, ಪುಟ್ಟ ನುಡಿದಂತೆ 40 ಚಿನ್ನದ ನಾಣ್ಯಗಳು ಅವರ ಕೈಗೆ ಸಿಕ್ಕಿತು. ಅಷ್ಟು ಮಾತ್ರವೇ ಇತ್ತು. ಬೇರೆ ಏನೂ ಇರಲಿಲ್ಲ.ಶರೀರಕ್ಕೆ ಹಾಕಿದ ಶರ್ಟಿನ ಒಳಭಾಗದಲ್ಲಿ ಸ್ಟಿಚ್ ಮಾಡಲಾಗಿದ್ದ ಜೇಬಿನಲ್ಲಿ ಸ್ವರ್ಣ ನಾಣ್ಯಗಳು ಜೋಪಾನವಾಗಿತ್ತು.
“ನೀನು ನೇರವನ್ನು ನುಡಿಯಲು ಕಾರಣವೇನು.?”
ಡಕಾಯಿತರ ನಾಯಕನ ಪ್ರಶ್ನೆಗೆ
“ಸತ್ಯವನ್ನೇ ಹೇಳಬೇಕೆಂದು ನನ್ನ ತಾಯಿಯು ಹೇಳಿದ್ದರು”
ಎಂಬ ಆ ಮುಗ್ಧ ಕಂದನ ಮಾತು ಅಲ್ಲಿ ಸೇರಿದವರ ಮನಸ್ಸನ್ನು ಸೀಳಿ ಹಾಕಿತು. ಬದುಕಿನುದ್ದಕ್ಕೂ ಸುಳ್ಳು, ವಂಚನೆ, ಕಳ್ಳತನಗಳ ದಾಸರಾಗಿ ಕಾಲ ಕಳೆಯುತ್ತಿದ್ದ ಅವರಿಗೆ ಸತ್ಯದೆಡೆಗೆ ಮರಳಲು ಶೈಖ್ ಜೀಲಾನಿ ರಳಿಯಲ್ಲಾಹು ಅನ್ಹುರವರು ನೇರ ದಾರಿ ತೋರಿಸಿದರು.

error: Content is protected !! Not allowed copy content from janadhvani.com