janadhvani

Kannada Online News Paper

ಕೆಸಿಎಫ್ ಸಂಘಟನೆಯ ಬಗ್ಗೆ ನನಗೆ ಹೆಮ್ಮೆಯಿದೆ: ಸುಲ್ತಾನುಲ್ ಉಲಮಾ

ಕಲ್ಲಿಕೋಟೆ,ನ.20: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ನ ಕಾರ್ಯಚಟುವಟಿಕೆಗಳಲ್ಲಿ ಹೆಮ್ಮೆಯಿದೆ ಎಂದು

ಭಾರತದ ಗ್ರಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು. ಝೂಮ್ ಆನ್‌ಲೈನ್ ಮೂಲಕ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಆಯೋಜಿಸಿದ ಗ್ಲೋಬಲ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ನಾವು ನಮ್ಮ ಮಾತಾಪಿತರಿಗಿಂತ, ಪತ್ನಿ ಮಕ್ಕಳಿಗಿಂತ, ಸಹಪಾಟಿಗಳಿಗಿಂತ, ಸ್ವಂತ ಶರೀರಕ್ಕಿಂತಲೂ ಮಿಗಿಲಾಗಿ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರನ್ನು ಪ್ರೀತಿಸುವವರಾಗಬೇಕು. ಆರ್ಥಿಕವಾಗಲಿ, ಕೌಟುಂಬಿಕವಾಗಲಿ ಅಥವಾ ಇನ್ನಿತರ ಯಾವುದೇ ತೊಂದರೆಗಳಿದ್ದರೂ ಅದಕ್ಕೆ ಪರಿಹಾರ ಲೋಕ ಪ್ರವಾದಿ (ﷺ) ತಂಙಳ್ ರವರಾಗಿದ್ದಾರೆ ಎಂದು ಸುಲ್ತಾನುಲ್ ಉಲಮಾ ರವರು ತಮ್ಮ ಹುಬ್ಬುರ್ರಸೂಲ್ ಪ್ರಭಾಷಣದಲ್ಲಿ ಹೇಳಿದರು.

ನಾವು ಜನಿಸಿದ ನಮ್ಮ ಸ್ವಂತ ದೇಶದಲ್ಲಿ ಸಿಗುವ ಸ್ವಾತಂತ್ರ್ಯ ವಿದೇಶದಲ್ಲಿ ನಮಗೆ ಸಿಗಲು ಸಾಧ್ಯವಿಲ್ಲ. ಆದರೂ ಅಲ್ಲಿಯ ನೀತಿ, ನಿಯಮಗಳನ್ನು ಮೀರದೆ ಉಲಮಾ ನೇತಾರರ ನಿರ್ದೇಶನದಂತೆ ವಿದೇಶದಲ್ಲಿ ಉತ್ತಮವಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕೆಸಿಎಫ್ ಕಾರ್ಯಕರ್ತರ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ ಎಂದು ಸುಲ್ತಾನುಲ್ ಉಲಮಾ ಹೇಳಿದರು.

ಮಂಗಳೂರಿನ ಹೃದಯ ಭಾಗವಾದ ಅಡ್ಯಾರ್ ಕಣ್ಣೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಲ್-ಮರ್ಕಝುಲ್ ಇಸ್ಲಾಮಿ ಕಲ್ಚರಲ್ ಸೆಂಟರ್ ಇದರ ಕಾಮಗಾರಿ ಪೂರ್ತಿಗೊಳಿಸಲು ಬಹುದೊಡ್ಡ ಮೊತ್ತವೊಂದು ಆವಶ್ಯಕತೆಯಿದೆ ಇದಕ್ಕೆ ಬೇಕಾದ ಸಹಾಯ ಸಹಕಾರ ಕೆಸಿಎಫ್ ಸಂಘಟನೆ ನೀಡುತ್ತಿದೆ ಹಾಗೂ ಇನ್ನೂ ಸಹಾಯ ಮಾಡಬೇಕು ಎಂದು ಉಸ್ತಾದರು ಸೂಚಿಸಿದರು.ಬಹು| ಎಸ್ ಪಿ ಹಂಝ ಸಖಾಫಿ ಬಂಟ್ವಾಳ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು, ಕರ್ನಾಟಕ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫೀ ಸಅದಿ ಬೆಂಗಳೂರು, ರಾಜ್ಯ SYS ಪ್ರಧಾನ ಕಾರ್ಯದರ್ಶಿ ಡಾ| ಅಬ್ದುರ್ರಶೀದ್ ಝೈನಿ, SSF ಹಂಗಾಮಿ ಅಧ್ಯಕ್ಷರಾದ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಯವರು ಮಾತನಾಡಿ ಶುಭಹಾರೈಸಿದರು.ರಬೀಉಲ್ ಅವ್ವಲ್ ತಿಂಗಳಲ್ಲಿ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರ ಜನ್ಮಗೊಂಡ ತಿಂಗಳಾದ್ದರಿಂದ ಈ ತಿಂಗಳಲ್ಲಿ ಪ್ರವಾದಿಯವ ಮದ್’ಹ್ ಹೇಳುವುದಕ್ಕೆ ಪ್ರತ್ಯೇಕ ಪ್ರತಿಫಲವಿದ್ದರೂ ಇತರ ಸಮಯಗಳಲ್ಲೂ ಪ್ರವಾದಿ (ﷺ) ತಂಙಳ್ ರವರ ಮದ್’ಹ್ ಹೇಳುವುದರಲ್ಲಿ ಯಾವುದೇ ಕೊರತೆ ತೋರಿಸಬಾರದು ಎಂದು ದಿಕ್ಸೂಚಿ ಭಾಷಣದಲ್ಲಿ ಬಹು| ನೌಫಲ್ ಸಖಾಫಿ ಕಳಸ ಉಸ್ತಾದರು ಹೇಳಿದರು.

ಭಾರತೀಯ ಸಮಯ ರಾತ್ರಿ 7.30 ಕ್ಕೆ ಆರಂಭಿಸಿದ ಕಾರ್ಯಕ್ರಮದಲ್ಲಿ ಮೊದಲಿಗೆ ಆತ್ಮೀಯ ಮಜ್’ಲಿಸ್ ನಡೆಯಿತು. ಹಾಫಿಲ್ ದರ್ವೇಶ್ ಅಲೀ ಬಹರೈನ್ ರವರ ಕಿರಾಅತ್ ನೊಂದಿಗೆ ಆರಂಭಗೊಂಡ ಸಭಾ ಕಾರ್ಮಕ್ರಮವನ್ನುಉಮರಾ ನೇತಾರರಾದ ಮುಹಮ್ಮದ್ ಹಾಜಿ ಸಾಗರರವರು ಉದ್ಘಾಟಿಸಿದರು. ಡಾ| ಹಝ್ರತ್ ಮುಹಮ್ಮದ್ ಪಾಝಿಲ್ ರಝ್ವೀ ಕಾವಳಕಟ್ಟೆಯವರು ಕಾರ್ಯಕ್ರಮದ ಕೊನೆಯಲ್ಲಿ ಆತ್ಮೀಯ ದುಆ ಮಜ್ಲಿಸ್ ಗೆ ನೇತ್ರತ್ವ ನೀಡಿದರು.

ಸದ್ರಿ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿಯ ನೇತಾರರುಗಳಾದ ಪಿ ಎಂ ಅಬ್ದುಲ್ ಹಮೀದ್ ಈಶ್ವರಮಂಗಳ, ಅಬೂಬಕ್ಕರ್ ಹಾಜಿ ರೈಸ್ಕೋ, ರಹೀಮ್ ಸಅದಿ ಕತ್ತಾರ್, ಅಲೀ ಮುಸ್ಲಿಯಾರ್ ಬಹರೈನ್ ಹಾಗೂ ಸದಸ್ಯ ರಾಷ್ಟ್ರೀಯ ನೇತಾರರು ಕಾರ್ಯಕರ್ತರು ಭಾಗವಹಿಸಿದ್ದರು.

ಸರಿಸುಮಾರು 1000ದಷ್ಟು ಸದಸ್ಯರುಗಳು ಭಾಗಿಯಾದ ಕಾರ್ಯಕ್ರಮವನ್ನುಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿಯವರಾದ ಜನಾಬ್| ಖಮರುದ್ದೀನ್ ಗೂಡಿನಬಳಿ ಯವರು ಸ್ವಾಗತಿಸಿ, ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಫೈನಾನ್ಷಿಯಲ್‌ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ರವರು ನಿರೂಪಿಸಿದರು. ಅಡ್ಮಿನ್ ಇಲಾಖೆಯ ಕಾರ್ಯದರ್ಶಿ ಇಕ್ಬಾಲ್ ಬರಕ ಒಮಾನ್ ರವರು ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com