ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯಿಂದ ಅನುಮೋದನೆ ಪಡೆದ ನಂತರ ಭಾರತದಲ್ಲಿ ತನ್ನ ಪಾವತಿ ಸೇವೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗುತ್ತಿದೆ ಎಂದು ಫೇಸ್‌ಬುಕ್ ಒಡೆತನದ ವಾಟ್ಸಾಪ್ ತಿಳಿಸಿದೆ.
ಹಲವು ವರ್ಷಗಳ ಪರೀಕ್ಷಾರ್ಥ ಬಳಕೆಯ ಬಳಿಕ ಕೊನೆಗೂ ಅನುಮತಿ ಗಿಟ್ಟಿಸುವಲ್ಲಿ ವಾಟ್ಸಾಪ್ ಯಶಸ್ವಿಯಾಗಿದೆ. ಹೀಗಾಗಿ ಶುಕ್ರವಾರದಿಂದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ವಾಟ್ಸಪ್ ಪೇ ಲಭ್ಯವಿರಲಿವೆ. 2018ರಲ್ಲಿಯೇ ವಾಟ್ಸಾಪ್ ತನ್ನ ಯುಪಿಐ ಆಧಾರಿತ ಪಾವತಿ ಸೇವೆಯನ್ನು ಭಾರತದಲ್ಲಿ ಪರೀಕ್ಷಿಸಲು ಪ್ರಾರಂಭಿಸಿತ್ತು. ಇದೀಗ ಬಳಕೆದಾರರು ಸಂದೇಶ ಕಳುಹಿಸುವುದರ ಜೊತೆಗೆ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಬಳಕೆಯಾಗಲಿದೆ.
ಶುಕ್ರವಾರದಿಂದ ಭಾರತದಾದ್ಯಂತ ಜನರು ವಾಟ್ಸಾಪ್ ಮೂಲಕ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಈ ಸುರಕ್ಷಿತ ಪಾವತಿ ಸೇವೆಯು ಸಂದೇಶವನ್ನು ಕಳುಹಿಸುವಷ್ಟೇ ಹಣ ವರ್ಗಾವಣೆ ಮಾಡಲು ಕೂಡ ಬಳಕೆಯಾಗಲಿದೆ. ಜನರು ಸುರಕ್ಷಿತವಾಗಿ ಕುಟುಂಬದ ಸದಸ್ಯರಿಗೆ ಹಣವನ್ನು ಕಳುಹಿಸಬಹುದು. ಸ್ಥಳೀಯ ಬ್ಯಾಂಕ್‌ಗೆ ಹೋಗದೆ ದೂರದಿಂದಲೇ ವೈಯಕ್ತಿಕವಾಗಿ ಹಣವನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ವಾಟ್ಸಾಪ್ ತಿಳಿಸಿದೆ.
ಎನ್‌ಪಿಸಿಐ ಸಹಭಾಗಿತ್ವದಲ್ಲಿ ಯುಪಿಐ ಬಳಸಿ 160ಕ್ಕೂ ಹೆಚ್ಚು ಬೆಂಬಲಿತ ಬ್ಯಾಂಕುಗಳೊಂದಿಗೆ ವಹಿವಾಟು ನಡೆಸಲು ಅನುವು ಮಾಡಿಕೊಡುವ ಭಾರತದ ಮೊದಲ, ನೈಜ-ಸಮಯದ ಪಾವತಿ ವ್ಯವಸ್ಥೆಯ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅದು ಹೇಳಿದೆ. ಈ ವರ್ಷದ ಜೂನ್‌ನಲ್ಲಿ ವಾಟ್ಸಾಪ್ ಬ್ರೆಜಿಲ್‌ನಲ್ಲಿ ‘ವಾಟ್ಸಾಪ್ ಪೇ’ ಅನ್ನು ಪ್ರಾರಂಭಿಸಿತ್ತು. ಈ ಸೇವೆಯನ್ನು ವ್ಯಾಪಕವಾಗಿ ಹೊರತಂದ ಮೊದಲ ದೇಶ ಬ್ರೆಜಿಲ್ ಆಗಿದೆ.
400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಭಾರತವನ್ನು ತನ್ನ ಅತಿದೊಡ್ಡ ಮಾರುಕಟ್ಟೆಯೆಂದು ವಾಟ್ಸಾಪ್ ಪರಿಗಣಿಸಿದೆ. ಈಗಾಗಲೇ ಬಳಕೆಯಲ್ಲಿರುವ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮತ್ತು ಅಮೆಜಾನ್ ಪೇ, ಭೀಮ್ ಯುಪಿಐ ಮುಂತಾದ ಆನ್‌ಲೈನ್, ವ್ಯಾಲೆಟ್ ಸೇವೆಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.
ಭಾರತದಲ್ಲಿ ವಾಟ್ಸಾಪ್ ಪೇಮೆಂಟ್ 10 ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿದೆ. ಐಫೋನ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯಲ್ಲಿ ವಾಟ್ಸಾಪ್ ಪಾವತಿ ಸೇವೆ ಬಳಕೆದಾರರಿಗೆ ಲಭ್ಯವಿದೆ. ಮೊದಲೇ ನಿಮ್ಮ ವಾಟ್ಸಾಪ್ ನಲ್ಲಿ ಪೇಮೆಂಟ್ ಆಯ್ಕೆಯಿದ್ದರೆ ನೀವು ಅದನ್ನು ಬಳಸಬಹುದಾಗಿದೆ. ಒಂದು ವೇಳೆ ಆಯ್ಕೆ ಇಲ್ಲದೆ ಹೋದಲ್ಲಿ ನೀವು ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿ ವಾಟ್ಸಾಪ್ ಪೇಮೆಂಟ್ ಆಯ್ಕೆಯನ್ನು ಪಡೆಯಬಹುದಾಗಿದೆ.
ವಾಟ್ಸಾಪ್ ಪೇಮೆಂಟ್ ಬಳಸಲು ಗ್ರಾಹಕರ ಬಳಿ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ್ ಇರಬೇಕು. ವಾಟ್ಸಾಪ್ ಪೇಮೆಂಟ್ ಗೆ ಹೋಗಿ ಬ್ಯಾಂಕ್ ವಿವರಗಳನ್ನು ನಮೂದಿಸಿದ ನಂತರ ಇದನ್ನು ಸಕ್ರಿಯಗೊಳಿಸಬಹುದು. ಇದಕ್ಕಾಗಿ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್ ಜೊತೆ ವಾಟ್ಸಾಪ್ ಒಪ್ಪಂದ ಮಾಡಿಕೊಂಡಿದೆ. ಬಳಕೆದಾರರು ಯುಪಿಐ ಬೆಂಬಲಿತ ಆ್ಯಪ್ ಬಳಸುವ ಯಾರಿಗಾದರೂ ವಾಟ್ಸಾಪ್‌ನಲ್ಲಿ ಹಣವನ್ನು ಕಳುಹಿಸಬಹುದು. ಇದಕ್ಕೆ ಯಾವುದೇ ಶುಲ್ಕಗಳಿರುವುದಿಲ್ಲವೆಂದು ವಾಟ್ಸಾಪ್ ತಿಳಿಸಿದೆ.
‘ಅಟ್ಯಾಚ್ ಮೆಂಟ್ಸ್’ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಸಾಮಾನ್ಯವಾಗಿ ಫೋಟೋ, ವಿಡಿಯೋಗಳು ಮುಂತಾದವು ಕಳಿಸುವುದಕ್ಕೆ ಬಳಸುವುದು ಇದನ್ನೇ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಮುನ್ನ ಫೋನ್ ಕಾಲ್ ಮಾಡಲು ಹಾಗೂ ಸಂದೇಶ ಓದಲು ಅನುಮತಿ ಕೇಳುತ್ತದೆ. ಜತೆಗೆ ಪಾವತಿ ಮಾಡುವ ಸಲುವಾಗಿ ಯುಪಿಐ ಪಾಸ್ ಕೋಡ್ ಅನ್ನು ನಿಗದಿ ಮಾಡಬೇಕು. ಒಂದು ವೇಳೆ ಈಗಾಗಲೇ ಯುಪಿಐ ಅಪ್ಲಿಕೇಷನ್ ಅನ್ನು ಬಳಸುತ್ತಿದ್ದಲ್ಲಿ ಅದೇ ಪಾಸ್ ಕೋಡ್ ಬಳಬಹುದು.
ಯುಪಿಐ ಐಡಿ ನಮೂದು ಮಾಡುವ ಆಯ್ಕೆ
ಯುಪಿಐ ಎನೇಬಲ್ಡ್ ಆಗಿರುವ ಬೇರೆ ಯಾವುದೇ ಅಪ್ಲಿಕೇಷನ್ ಬಳಸುತ್ತಿರುವವರಿಗೆ ವಾಟ್ಸಾಪ್ ಪೇಮೆಂಟ್ ಬಳಸಿ, ಹಣ ಕಳುಹಿಸಬಹುದು. ಒಂದು ವೇಳೆ ಹಣ ಸ್ವೀಕರಿಸಬೇಕಾದ ವ್ಯಕ್ತಿಯ ಬಳಿ ವಾಟ್ಸಾಪ್ ಪೇಮೆಂಟ್ಸ್ ಖಾತೆ ಇರದಿದ್ದಲ್ಲಿ ಯುಪಿಐ ಐಡಿ ನಮೂದು ಮಾಡುವ ಆಯ್ಕೆ ಬರುತ್ತದೆ. ಆ ನಂತರ ಗೂಗಲ್ ಪೇ, ಫೋನ್ ಪೇ ಅಥವಾ ಮತ್ಯಾವುದೇ ಐಡಿ ನಮೂದಿಸಿ ಪಾವತಿ ಮಾಡಬಹುದು.
ವಾಟ್ಸಾಪ್ ಪೇ ನಲ್ಲಿ ಕೂಡ ಯುಪಿಐನಲ್ಲಿ ಇರುವಂತೆ ಒಂದು ಲಕ್ಷ ರುಪಾಯಿ ವ್ಯವಹಾರದ ಮಿತಿ ಅನ್ವಯ ಆಗುತ್ತದೆ.