ಮಂಗಳೂರು, ನ.2:ಮಂಗಳೂರಿನ ಕಿನ್ಯಾದಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಿಕಾಸ್ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್, ಉಳ್ಳಾಲ ಪಾಕಿಸ್ತಾನವಾಗಿ ಬದಲಾಗುತ್ತಿದೆ ಎಂದು ಇಲ್ಲಿನ ಮುಸ್ಲಿಂ ಜನಸಂಖ್ಯೆಯನ್ನು ಸೂಚಿಸಿ ಮಾತನಾಡಿದ್ದಾರೆ.ಅಲ್ಲದೇ ಹಿಂದೂಗಳು ತಮ್ಮ ದೇವಾಲಯಗಳು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಜನಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕೂಡ ಕರೆ ನೀಡಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಸ್ತಿತ್ವಕ್ಕೆ ಬರಲು ಕಾರಣ ಅವರ ಜನಸಂಖ್ಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮನೆಯಲ್ಲಿ ಒಂದೇ ಮಗು ಇದ್ದಾಗ ಅವಕ್ಕೆ ಒಡಹುಟ್ಟಿದವರು ಇಲ್ಲದೇ ಸ್ವಾರ್ಥಿಗಳಾಗುತ್ತಾರೆ. ಅದೇ ಮಕ್ಕಳಿಗೆ ಜೊತೆಯಾಗಿ ಮಕ್ಕಳಿದ್ದರೆ ಅವರ ಸಂತೋಷ ಹೆಚ್ಚುತ್ತದೆ. ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಕಿನ್ಯಾದ ಸುತ್ತಮುತ್ತ ಹಿಂದೂಗಳು ಕಡಿಮೆಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಉಳ್ಳಾಲದ ಬಗ್ಗೆ ಮಾತನಾಡುವ ಆಗಿಲ್ಲ ಎಂದರು.
ಜನಸಂಖ್ಯೆ ಇದೇ ರೀತಿ ಕಡಿಮೆಯಾದರೆ, ಯಾರು ನಮ್ಮ ದೇವಾಲಯ ಹಾಗೂ ಸಂಪ್ರದಾಯಗಳನ್ನು ರಕ್ಷಿಸುತ್ತಾರೆ? ಯಾಕೆ ಪಾಕಿಸ್ತಾನ ದೇಶ ಉದಯವಾಯಿತು. ನಮ್ಮಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಯಿತು. ಅವರಲ್ಲಿ ಹೆಚ್ಚಾಯಿತು. ಇದೇ ಕಾರಣಕ್ಕೆ ಪಾಕಿಸ್ತಾನ , ಬಾಂಗ್ಲಾದೇಶ ಸೃಷ್ಟಿಯಾದವರು. ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನದಂತೆ ಇಲ್ಲವೇ? ಅಲ್ಲಿ ನಿಮಗೆ ಏನಾದರೂ ವ್ಯತ್ಯಾಸ ಕಾಣುತ್ತದೆಯೇ? ನಮ್ಮ ಪಕ್ಕದಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ ಎಂದರು.
ಆರ್ಎಸ್ಎಸ್ ಮುಖಂಡ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದ್ದು, ಹೊಸ ವಿವಾದ ಹುಟ್ಟುಹಾಕಿದೆ.
ಉಳ್ಳಾಲದಲ್ಲಿ 2011ರ ಜನಗಣತಿ ಪ್ರಕಾರ ಶೇ.56.1 ರಷ್ಟು ಮುಸ್ಲಿಂರಿದ್ದರೆ, 34.8ರಷ್ಟು ಹಿಂದೂಗಳಿದ್ದಾರೆ. 9.34ರಷ್ಟು ಕ್ರೈಸ್ತರಿದ್ದಾರೆ. ಇನ್ನು ಈ ಕ್ಷೇತ್ರವನ್ನು ಕಾಂಗ್ರೆಸ್ನ ಶಾಸಕ ಯುಟಿ ಖಾದರ್ ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಕನ್ನಡ ಏಕೈಕ ಕಾಂಗ್ರೆಸ್ ಶಾಸಕ ಇವರಾಗಿದ್ದಾರೆ.
ಆರ್ಎಸ್ಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯುಟಿ ಖಾದರ್, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಪಾಕಿಸ್ತಾನದ ಮೇಲಿನ ಪ್ರೀತಿ ಹೊಸತೇನಲ್ಲ. ಪಾಕಿಸ್ತಾನದ ಬಗ್ಗೆ ಪದೇ ಪದೇ ಉಲ್ಲೇಖಿಸುವುದನ್ನು ನೋಡಿದರೆ, ಅವರ ಗುರು ಜಿನ್ನಾ ಎಂಬ ಅನುಮಾನ ಮೂಡುತ್ತದೆ. ಅಲ್ಲದೇ ಅವರು ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಇತಿಹಾಸವನ್ನು ಅರಿತಿದ್ದಾರೆ ಎಂಬತೆ ಕಾಣುತ್ತದೆ ಎಂದು ತಿಳಿಸಿದ್ದಾರೆ.
ಸಮಾಜದ ಶಾಂತಿಯನ್ನು ಕೆಲವು ಅಂಶಗಳು ಹಾಳುಮಾಡುತ್ತದೆ. ಅದರಲ್ಲಿ ಪಾಕಿಸ್ತಾನ ಪ್ರಮುಖ ವಿಷಯ. ಆದರೆ, ಉಳ್ಳಾಲದ ಪ್ರತಿ ಮೂಲೆಯಲ್ಲಿ ನಾನು ಭಾರತವನ್ನು ನೋಡಬಲ್ಲೆ ಎಂದಿದ್ದಾರೆ.