ನವ ದೆಹಲಿ: ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ಅದೇ ಊರಿನ ಮೇಲ್ಜಾತಿಗೆ ಸೇರಿದ ಯುವಕರು ನಡೆಸಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇತ್ತೀಚೆಗೆ ಇಡೀ ದೇಶದ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಆದರೆ, ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಸ್ವತಃ ಜಿಲ್ಲಾಧಿಕಾರಿ ಸಂತ್ರಸ್ತೆಯ ಕುಟುಂಬಸ್ಥರನ್ನು ಹೆದರಿಸುವ ವಿಡಿಯೋ ಸಹ ಬಿಡುಗಡೆಯಾಗಿ ಸಂಚಲನ ಉಂಟು ಮಾಡಿತ್ತು. ಹೀಗಾಗಿ ಈ ಪ್ರಕರಣದ ವಿಚಾರಣೆ ಉತ್ತರಪ್ರದೇಶದ ಅಲಹಾಬಾದ್ ಕೋರ್ಟ್ನಲ್ಲಿ ನಡೆಯುವುದು ಸರಿಯಲ್ಲ. ಇದರಿಂದ ಸಂತ್ರಸ್ತೆಯ ಕುಟುಂಬಸ್ಥರ ಮೇಲೆ ಮತ್ತಷ್ಟು ಒತ್ತಡ ಬೀಳಲಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ದೆಹಲಿ ಕೋರ್ಟ್ಗೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಒತ್ತಾಯಿಸಲಾಗಿತ್ತು.
ಆದರೆ, ಈ ಸಂಬಂಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ “ಉತ್ತರ ಪ್ರದೇಶದ ಹತ್ರಾಸ್ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ” ಎಂದು ತಿಳಿಸಿದೆ.
ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೂ ಗಲ್ಲು ಶಿಕ್ಷೆ ಆಗುವಂತೆ ನೋಡಿಕೊಂಡ ಸುಪ್ರೀಂ ಕೋರ್ಟ್ ವಕೀಲೆ ಸೀಮಾ ಕುಶ್ವಾಹ ಅವರೇ ಇಂದು ಹತ್ರಾಸ್ ದಲಿತ ಹೆಣ್ಣು ಮಗಳ ಅತ್ಯಾಚಾರ ಕೊಲೆ ಪ್ರಕರಣದಲ್ಲೂ ಕೋರ್ಟ್ಗೆ ಹಾಜರಾಗುತ್ತಿದ್ದಾರೆ. ಈ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ ಸೀಮಾ ಕುಶ್ವಾಹ ಅವರೇ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ ದಲಿತ ಯುವತಿಯ ಕುಟುಂಬಕ್ಕೆ ಅದೇ ಗ್ರಾಮದ ಸವರ್ಣೀಯರಿಂದ ಕೊಲೆ ಬೆದರಿಕೆ ಸಹ ಇದೆ. ಹೀಗಾಗಿ ಸಂತ್ರಸ್ತ ದಲಿತ ಯುವತಿಯ ಕುಟುಂಬಕ್ಕೆ ಮೂರು ಸ್ತರದ ಭದ್ರತೆಯನ್ನು ನೀಡಲಾಗುವುದು ಎಂದು ಉತ್ತರಪ್ರದೇಶ ಸರಕಾರ ಹೇಳಿದೆ. ಉತ್ತರಪ್ರದೇಶ ಸರಕಾರ ಸಲ್ಲಿಸಿರುವ ಅಫಿಡವಿಟ್ನ್ನು ಸರ್ಕಾರದ ಪರವಾಗಿ ವಾದಿಸಲು ಬಂದಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉಲ್ಲೇಖಿಸುವುದರೊಂದಿಗೆ ಈ ವಿಚಾರಣೆ ಆರಂಭವಾಗಿತ್ತು.