ಬೆಂಗಳೂರು, ಅ.13: ಕೇಂದ್ರ ಸರ್ಕಾರದ ಯೋಜನೆಯಡಿ ಸ್ವಯಂ ಚಾಲಿತ ಅಕ್ಕಿ ವಿತರಣಾ ವ್ಯವಸ್ಥೆಯನ್ನು ದೇಶಾದ್ಯಂತ ಅಳವಡಿಸಲಾಗುತ್ತಿದೆ. ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರಾಖಂಡ್‍ನ ಐದು ಕಡೆಗಳಲ್ಲಿ ಇಂತಹ ಎಟಿಎಂಗಳನ್ನು ಆರಂಭಿಸಲಾಗುತ್ತಿದೆ.
ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಅಕ್ಕಿ ವಿತರಿಸುವ ಎಟಿಎಂ ಯಂತ್ರಗಳು ರಾಜ್ಯದಲ್ಲಿ ಶೀಘ್ರದಲ್ಲೇ ಸ್ಥಾಪನೆಯಾಗಲಿವೆ. ಮೊದಲ ಹಂತದಲ್ಲಿ ಇದು ಪ್ರಾಯೋಗಿಕವಾಗಿ ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಮತ್ತೊಂದು ಕಡೆ ಪ್ರಾರಂಭವಾಗಲಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ಹಂತಹಂತವಾಗಿ ರಾಜ್ಯಾದ್ಯಂತ ಅಳವಡಿಸಲು ಸರ್ಕಾರ ಮುಂದಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಇದರಿಂದ ಸಹಾಯವಾಗಲಿದೆ ಎಂದು ಹೇಳಲಾಗಿದೆ.ಎಟಿಎಂಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಇದರ ಹೊಣೆಯನ್ನು ಜಂಟಿ ನಿರ್ದೇಶಕರಿಗೆ ಹೆಚ್ಚುವರಿಯಾಗಿ ವಹಿಸಲಾಗುವುದು.
ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳನ್ನುಗುರುತಿಸಿ ಅಂತಹ ಕಡೆಗಳಲ್ಲಿ ಎಟಿಎಂಗಳನ್ನು ಸ್ಥಾಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.ಯಂತ್ರಕ್ಕೆ ಈ ಮೊದಲೇ ಎಷ್ಟು ಪ್ರಮಾಣದಲ್ಲಿ ಅಕ್ಕಿ ನೀಡಬೇಕೆಂಬುದು ಹಾಗೂ ಪಡಿತರ ಚೀಟಿದಾರರ ಮಾಹಿತಿ ದಾಖಲಾಗಿರುತ್ತದೆ.
ಒಂದು ವೇಳೆ ವ್ಯಕ್ತಿ 2 ಬಾರಿ ಅಕ್ಕಿಗೆ ಬಂದರೆ ಯಂತ್ರದ ಬಳಿ ಇರುವ ಕ್ಯಾಮರಾಗಳು ಆತನ ಚಹರೆಯನ್ನು ಪತ್ತೆಹಚ್ಚುತ್ತವೆ. ಒಬ್ಬ ವ್ಯಕ್ತಿಗೆ ಇಷ್ಟೇ ಅಕ್ಕಿ ಎಂದು ನಿಗದಿ ಮಾಡಿ ಎಟಿಎಂಗಳಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.
ಯಂತ್ರದಲ್ಲಿ ಹಣ ಹಾಕಿದರೆ ಅಕ್ಕಿ ಸಿಗುತ್ತದೆ. ಜನರು ಬ್ಯಾಗ್ ಗಳಲ್ಲಿ ಕೊಳವೆಯಿಂದ ಬರುವ ಅಕ್ಕಿಯನ್ನು ಹಿಡಿದುಕೊಳ್ಳಬೇಕು. ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳ ಎದುರು ಜನ ಸರತಿಸಾಲಿನಲ್ಲಿ ನಿಲ್ಲುವ ಬದಲು ಸುಲಭವಾಗಿ ಅಕ್ಕಿ ಪಡೆಯಬಹುದಾಗಿದೆ.
ರಾಜ್ಯದ ಸುಮಾರು 4.3 ಕೋಟಿಗೂ ಹೆಚ್ಚು ಜನರು ಪಡಿತರ ಆಹಾರ ಧಾನ್ಯ ಪಡೆಯಲು ತಮ್ಮ ಕೆಲಸ ಕಾರ್ಯ ಬಿಟ್ಟು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.ಇದನ್ನು ತಡೆಯಲು ಮತ್ತು ಕೊರೋನಾ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಅಕ್ಕಿ ಎಟಿಎಂ ಅಳವಡಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಈಗಾಗಲೇ ರಾಜ್ಯದಾದ್ಯಂತ ಪಿಡಿಎಸ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 800 ವಾಟರ್ ಎಟಿಎಂಗಳನ್ನು ಸ್ಥಾಪಿಸಿದೆ ಮತ್ತು ಅಕ್ಕಿ ಎಟಿಎಂ ವ್ಯವಸ್ಥೆಯನ್ನು ಅದೇ ರೀತಿಯಲ್ಲಿ ಅನುಸರಿಸಲಾಗುವುದು.
ಮೂಲಗಳ ಪ್ರಕಾರ ಅಕ್ಕಿ ಎಟಿಎಂಗಳಲ್ಲಿ 100 ಕೆಜಿಯಿಂದ 500 ಕೆಜಿ ಸಾಮಥ್ರ್ಯವಿರುವ ಸಾಧ್ಯತೆಯಿದ್ದು, ಬೇಡಿಕೆಗನುಗುಣವಾಗಿ ಯಂತ್ರಗಳನ್ನು ಅಳವಡಿಸಲಾಗುತ್ತಿದೆ.
ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ಸರ್ಕಾರ 1.27 ಕೋಟಿ ಕುಟುಂಬಕ್ಕೆ ಅಕ್ಕಿ, ಧಾನ್ಯ ಮತ್ತಿತರ ಅಗತ್ಯ ವಸ್ತುಗಳನ್ನು ಪ್ರತಿ ತಿಂಗಳು ಪೂರೈಸುತ್ತಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಧಾನ್ಯಗಳನ್ನು ನೀಡಲಾಗುತ್ತಿದ್ದು, ಎಪಿಎಲ್ ಕಾರ್ಡ್ ದಾರರಿಗೆ ಸಾಮಾನ್ಯ ದರದಲ್ಲಿ ವಿತರಿಸಲಾಗುತ್ತಿದೆ. ಬಯೋಮೆಟ್ರಿಕ್ಸ್ ನೊಂದಿಗೆ ಎಟಿಎಂ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು.
ಎಟಿಎಂಗಳಿಗೆ ಪ್ರವೇಶ ಪಡೆಯಲು ನಾಣ್ಯಗಳ ಬದಲಿಗೆ ಸ್ಮಾರ್ಟ್ ಕಾರ್ಡ್ ಅಥವಾ ಬಯೋಮೆಟ್ರಿಕ್ ವ್ಯವಸ್ಥೆ ಇರಬಹುದು ಎಂದು ಹೇಳಲಾಗಿದೆ.ಕೊರೊನಾ ಲಾಕ್ಡೌನ್ ನಡುವೆ ಜನಸಾಮಾನ್ಯರಿಗೆ ಆಹಾರಕ್ಕೆ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ವಿಯೆಟ್ನಾಂ ಹಾಗೂ ಮಲೇಷ್ಯಾದಲ್ಲಿ ರೈಸ್ ಎಟಿಎಂ ಅಳವಡಿಸುವ ಮೂಲಕ ಅಕ್ಕಿ ವಿತರಣೆ ಮಾಡಲಾಗಿತ್ತು.ಅಕ್ಕಿ ವಿತರಣೆ ವಿಶ್ವ ಆರೋಗ್ಯ ಸಂಸ್ಥೆಯ ಆಹಾರ ಕಾರ್ಯಕ್ರಮದ ಭಾಗವಾಗಿದ್ದು, ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ.