ಮಕ್ಕತುಲ್ ಮುಖರ್ರಮಃ: ವಿಶ್ವಾದ್ಯಂತವಿರುವ ವಿಶ್ವಾಸಿಗಳ ಕಣ್ಣು ಮತ್ತು ಮನಸ್ಸು ತುಂಬುವಂತೆ ಉಮ್ರಾ ತೀರ್ಥಯಾತ್ರೆ ಮಕ್ಕಾದಲ್ಲಿ ಪ್ರಾರಂಭವಾಯಿತು. ಕೋವಿಡ್ ಪ್ರಕರಣಗಳು ಇಳಿಕೆ ಕಂಡಿರುವುದರಿಂದ, ಕೋವಿಡ್ ಪ್ರೋಟೋಕಾಲ್ ನ್ನು ಕಟ್ಟುನಿಟ್ಟಾಗಿ ಪಾಲಿಸಿ ಉಮ್ರಾ ನಿರ್ವಹಣೆಗೆ ಅವಕಾಶ ನೀಡಲಾಗಿದೆ. ವರ್ಷಂಪ್ರತಿ ಬರುವ ಲಕ್ಷೋಪಲಕ್ಷ ಯಾತ್ರಾರ್ಥಿಗಳ ಬದಲು, ಪ್ರತಿ ಹದಿನೈದು ನಿಮಿಷಕ್ಕೆ 100 ಯಾತ್ರಾರ್ಥಿಗಳು ಮತ್ವಾಫ್ ಪ್ರವೇಶಿಸುತ್ತಾರೆ.
ಹರಮ್ ಮತ್ತು ಕಅಬಾವನ್ನು ಮತ್ತೆ ಕಣ್ಣಾರೆ ನೋಡುವ ಭಾಗ್ಯ ಲಭಿಸಿರುವ ಉಮ್ರಾ ಯಾತ್ರಿಕರಿಗೆ, ಕಿಸ್ವಾವನ್ನು ಮುಟ್ಟಲು ಅಥವಾ ಹಜರುಲ್ ಅಸ್ವದ್ ಮುಟ್ಟಲು ಸಾಧ್ಯವಿಲ್ಲ. ಕೋವಿಡ್ ನಿಟ್ಟಿನಲ್ಲಿ ಸ್ಪರ್ಶವನ್ನು ನಿಷೇಧಿಸಲಾಗಿದೆ.
ನಿನ್ನೆ ಮಧ್ಯರಾತ್ರಿಯಿಂದ 100 ಜನರ ಗುಂಪುಗಳಾಗಿ ಯಾತ್ರಾರ್ಥಿಗಳು ಕಅಬಾ ಪರಿಸರ ತಲುಪಿದರು. ಇಂದು, ಆರು ಹಂತಗಳಲ್ಲಿ 6,000 ಜನರು ಉಮ್ರಾ ಪೂರ್ಣಗೊಳಿಸಲಿದ್ದಾರೆ. ಯಾತ್ರಿಕರು ಆಗಮಿಸುವ ಹಿನ್ನೆಲೆಯಲ್ಲಿ , ಹರಮ್ ಶರೀಫನ್ನು ಪ್ರತಿದಿನ ಹತ್ತು ಬಾರಿ ಸೋಂಕುರಹಿತಗೊಳಿಸಲಾಗುತ್ತದೆ.
ಕೋವಿಡ್ ವ್ಯಾಪಕಗೊಂಡ ನಿಟ್ಟಿನಲ್ಲಿ ಮಾರ್ಚ್‌ನಲ್ಲಿ ಸ್ಥಗಿತಗೊಂಡಿದ್ದ ಉಮ್ರಾ ಯಾತ್ರೆಯನ್ನು ಸೌದಿ ಅರೇಬಿಯಾ ಇದೀಗ ಪುನರಾರಂಭಿಸಿದೆ. 15 ನಿಮಿಷಗಳಲ್ಲಿ, ಒಂದು ಗುಂಪು ಕಅಬಾ ಬಳಿ ತವಾಫ್ ಅನ್ನು ಪೂರ್ಣಗೊಳಿಸಲಿದೆ. ನಂತರ, ಸಫಾ ಮರ್ವಾ ಬೆಟ್ಟಗಳ ನಡುವಿನ ಸಅ್ ಯ್ ಪೂರ್ಣಗೊಳಿಸುವರು. ಇಂದು, 6,000 ಜನರು ಉಮ್ರಾವನ್ನು ಪೂರ್ಣಗೊಳಿಸಲಿದ್ದಾರೆ. ಹರಮ್ ಪ್ರವೇಶಿಸಲು ಮತ್ತು ನಿರ್ಗಮಿಸಲು ಪ್ರತ್ಯೇಕ ಬಾಗಿಲುಗಳಿವೆ.
ನಿರ್ಧಿಷ್ಟ ಸ್ಥಳಗಳಿಂದ ಯಾತ್ರಿಕರು ಬಸ್‌ಗಳಲ್ಲಿ ತಲುಪುತ್ತಾರೆ. ಖಾಸಗಿ ವಾಹನಗಳಲ್ಲಿ ಬರುವವರಿಗೂ ಪ್ರತ್ಯೇಕ ಸ್ಥಳವನ್ನು ಏರ್ಪಡಿಸಲಾಗಿದೆ. ಈ ತಿಂಗಳ 17 ರವರೆಗೆ ಪ್ರತಿದಿನ 6,000 ಜನರು ಉಮ್ರಾ ನಿರ್ವಹಿಸಲಿದ್ದಾರೆ.ಅ.18 ರಿಂದ ಹದಿನೈದು ಸಾವಿರ ಜನರು ಉಮ್ರಾ ನಿರ್ವಹಿಸುವರು.
ನವೆಂಬರ್ 1 ರಿಂದ ವಿದೇಶದಿಂದ ಬರುವ ಯಾತ್ರಾರ್ಥಿಗಳಿಗೆ ಉಮ್ರಾ ನಿರ್ವಹಿಸಲು ಅವಕಾಶವಿದೆ. ಅಂದಿನಿಂದ, 20,000 ಜನರು ಉಮ್ರಾಕ್ಕೆ ಹಾಜರಾಗಬಹುದು ಮತ್ತು 60,000 ಜನರು ಪ್ರತಿದಿನ ಹರಮ್ ನಲ್ಲಿ ನಮಾಜಿನಲ್ಲಿ ಪಾಲ್ಗೊಳ್ಳಬಹುದಾಗಿದೆ.
ದಿನಕ್ಕೆ 4,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳಿದ್ದ ಸೌದಿ ಅರೇಬಿಯಾದಲ್ಲಿ ಈಗ ದಿನಕ್ಕೆ 400 ಪ್ರಕರಣಗಳು ವರದಿಯಾಗುತ್ತಿದೆ.ಕಟ್ಟುನಿಟ್ಟಿನ ಲಾಕ್‌ಡೌನ್ ಮತ್ತು ಹಂತ ಹಂತದ ತೆರವು ಮೂಲಕ ಕೋವಿಡ್ ಪ್ರಕರಣಗಳನ್ನು ಹತ್ತಿಕ್ಕಲು ದೇಶಕ್ಕೆ ಸಾಧ್ಯವಾಯಿತು. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಉಮ್ರಾ ಯಾತ್ರಿಕರಿಗೆ ಹರಂ ಶರೀಫನ್ನು ಇಷ್ಟು ಬೇಗ ತಲುಪಲು ಸಾಧ್ಯವಾಗಿದೆ.