janadhvani

Kannada Online News Paper

ಪ್ರಧಾನಿ ಮೋದಿಯವರ ಹುಟ್ಟುಹಬ್ಬ: “ರಾಷ್ಟ್ರೀಯ ನಿರುದ್ಯೋಗ ದಿನ” ಟ್ರೆಂಡಿಂಗ್

ಹೊಸದಿಲ್ಲಿ:ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ದಿನವನ್ನು ಸಾಮಾಜಿಕ ಜಾಲತಾಣಿಗರು ವಿಶಿಷ್ಟವಾಗಿ, ಅಂದರೆ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು “ರಾಷ್ಟ್ರೀಯ ನಿರುದ್ಯೋಗ ದಿನ”ವನ್ನಾಗಿ ಆಚರಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಟ್ರೆಂಡಿಂಗ್ ಆಗಿತ್ತು. ನಿರೀಕ್ಷೆಗೂ ಮೀರಿ ನೆಟ್ಟಿಗರು ಈ ಅಭಿಯಾನದಲ್ಲಿ ಪಾಲ್ಗೊಂಡು #NationalUnemploymentDay ಎಂಬ ಹ್ಯಾಶ್‌ಟ್ಯಾಗ್ ಬಳಸಿ ಲಕ್ಷಾಂತರ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

ಭಾತರದಲ್ಲಿ ಕಳೆದ 45 ವರ್ಷಗಳ ಇತಿಹಾಸದಲ್ಲಿ ಈ ಪ್ರಮಾಣದ ನಿರುದ್ಯೋಗದ ಸಮಸ್ಯೆ ಸಂಭವಿಸಿರಲಿಲ್ಲ ಎಂದು ಹಲವು ತಜ್ಞರ ಅಭಿಪ್ರಾಯ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಘೋಷಿಸಿ ಪ್ರಧಾನಿ ಮೋದಿ 2014 ರಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಆದರೆ ಇಂದು ‘ಉದ್ಯೋಗ ಸೃಷ್ಟಿಯಾಗುವುದು ಬೇಡ, ಇರುವ ಉದ್ಯೋಗ ಉಳಿಸಿಕೊಂಡರೆ ಸಾಕು’ ಎಂಬಂತಾಗಿದೆ.

ಇದರ ಫಲವಾಗಿಯೇ ಇತ್ತೀಚಿನ ದಿನಗಳಲ್ಲಿ ಮೋದಿಯವರನ್ನು ಯುವಜನತೆ ತಿರಸ್ಕರಿಸುತ್ತಿರುವ ಕುರುಹುಗಳು ಹೆಚ್ಚಾಗಿ ಕಾಣುತ್ತಿದೆ. ಕಳೆದ ತಿಂಗಳಿನಲ್ಲಿ ಮೋದಿಯವರ ಮನ್‌ಕಿಬಾತ್‌ನಿಂದ ಆರಂಭವಾದ ಈ ತಿರಸ್ಕಾರ ಇಂದು ಅವರ ಹುಟ್ಟುಹಬ್ಬವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ”ವನ್ನಾಗಿ ಆಚರಿಸಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಟ್ವಿಟ್ಟರ್‌ನಲ್ಲಿ #NationalUnemploymentDay ಮತ್ತು #HappyBirthdayPMModi ಟ್ರೆಂಡಿಂಗ್ ಆಗುತ್ತಿದ್ದು, ಒಟ್ಟಾರೆ ಇಂದಿನ ದಿನವನ್ನು ನಿರುದ್ಯೋಗ ದಿನವೆಂದು ವಿವಿಧ ಭಾಷೆಗಳಲ್ಲಿ, ವಿವಿಧ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಸುಮಾರು 2.3 ಮಿಲಿಯನ್ ಟ್ವೀಟ್‌ಗಳನ್ನು ಮಾಡಿದ್ದಾರೆ. ಹಿಂದಿಯಲ್ಲಿ #राष्ट्रीयबेरोजगारदिवस ‘ರಾಷ್ಟ್ರೀಯ ಬೇರೋಜ್ಗಾರ್ ದಿವಸ್’ ಎಂದೂ ಟ್ರೆಂಡಿಂಗ್ ಆಗುತ್ತಿದೆ. ಭಾರತದ ಎಲ್ಲಾ ಭಾಷಗಳಲ್ಲಿಯೂ ‘ರಾಷ್ಟ್ರೀಯ ನಿರುದ್ಯೋಗ ದಿನ’ ಟ್ರೆಂಡಿಂಗ್ ಆರಂಭವಾಗಿದೆ.

error: Content is protected !! Not allowed copy content from janadhvani.com